ಹೊಸದಿಲ್ಲಿ : ಭೀಮಾ ಕೋರೇಗಾಂವ್ ಹಿಂಸೆಯು ಸಂಚಿನ ಭಾಗವಾಗಿದ್ದು ಅದು ಸಂಪೂರ್ಣವಾಗಿ ಪೂರ್ವ ಯೋಜಿತವಾಗಿತ್ತು ಎಂದು ಘಟನೆಯ ಸತ್ಯ ಶೋಧನೆಗೆ ರೂಪಿಸಲ್ಪಟ್ಟಿದ್ದ 9 ಸದಸ್ಯರ ಸಮಿತಿಯು ಇಂದು ಸಲ್ಲಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಹಿಂಸೆ ಭುಗಿಲೇಳುವ ಮುನ್ನವೇ ಸೀಮೆ ಎಣ್ಣೆ, ದೊಣ್ಣೆಗಳು ಮತ್ತು ತಲವಾರುಗಳು ತುಂಬಿದ್ದ ಟ್ಯಾಂಕರ್ ಗಳನ್ನು ತರಲಾಗಿತ್ತು.ಅಂತೆಯೇ ಭೀಮಾ ಕೋರೆಗಾಂವ್ ಸಮೀಪದ ಸನಸ್‌ವಾಡಿ ಪ್ರದೇಶದ ಜನರಿಗೆ ಹಿಂಸೆ ಭುಗಿಲೇಳಲಿದೆ ಎಂಬುದು ಖಚಿತವಾಗಿ ಗೊತ್ತಿತ್ತು ಎಂದು ವರದಿ ಹೇಳಿದೆ.
ಈ ಪೂರ್ವ ಯೋಜಿತ ಹಿಂಸೆಯನ್ನು ತಡೆಯಲು ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳದಿದ್ದ ಪೊಲೀಸರ ನಿಷ್ಕ್ರಿಯತೆಯನ್ನು ವರದಿಯು ಖಂಡಿಸಿದೆ.
ಕೇಸರಿ ಧ್ವಜಧಾರಿ ಸಮೂಹವನ್ನು ತಡೆಯುವ ಬದಲು ಆ ಸಮೂಹದೊಂದಿಗೇ ಮಫ್ತಿಯಲ್ಲಿದ್ದ ಪೊಲೀಸರು ಸಾಗುತ್ತಿದ್ದರು ಎಂದೂ ವರದಿ ತಿಳಿಸಿದೆ.
ಪೊಲೀಸರು ಮನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಹಿಂಸೆ ಭುಗಿಲೇಳುವುದನ್ನು ತಪ್ಪಿಸಬಹುದಿತ್ತು ಅಥವಾ ತಡೆಯಬಹುದಿತ್ತು ಎಂದಿರುವ ವರದಿಯು ಹಿಂಸೆ ಭುಗಿಲೇಳಲು ಕಾರಣರಾದ ಇಬ್ಬರು ಬಲಪಂಥೀಯ ನಾಯಕರನ್ನು (ಮಿಲಿಂದ್ ಏಕಬೋಟೆ ಮತ್ತು ಸಂಭಾಜಿ ಭಿಡೆ) ಹೆಸರಿಸಿದೆ.
ಕಳೆದ ಹದಿನೈದು ವರ್ಷಗಳಲ್ಲಿ ಹಿಂಸೆ ಭುಗಿಲೇಳುವಂತಹ ವಾತಾವರಣವನ್ನು ಈ ನಾಯಕರು ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ. ಜಾತಿಯ ನೆಲೆಯಲ್ಲಿ ಈ ನಾಯಕರು ಜನರನ್ನು ವಿಭಜಿಸಲು ಯತ್ನಿಸಿದ್ದಾರೆ ಎಂದೂ ವರದಿ ಹೇಳಿದೆ.