Advertisement

ಅಲೆಮಾರಿಗಳಿಗಾಗಿ ತಾತ್ಕಾಲಿಕ ಅಂಗನವಾಡಿ

10:35 AM Jul 15, 2019 | Team Udayavani |

ಬೀದರ: ನೌಬಾದ್‌ ಹತ್ತಿರದ ಕೆಐಎಡಿಬಿ ಹೌಸಿಂಗ್‌ ಲೇಔಟ್‌ನ ಹನುಮಾನ ಮಂದಿರದಲ್ಲಿ ಅಲೆಮಾರಿ ಸಮುದಾಯದವರ ಮಕ್ಕಳಿಗಾಗಿ ತಾತ್ಕಾಲಿಕವಾಗಿ ಆರಂಭಿಸಲಾದ ಅಂಗನವಾಡಿ ಕೇಂದ್ರವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಉದ್ಘಾಟಿಸಿದರು.

Advertisement

ಈ ಹಿಂದೆ ಅಲೆಮಾರಿಗಳ ಬಡಾವಣೆಗೆ ಭೇಟಿ ನೀಡಿದ ನ್ಯಾಯಾಧೀಶರು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಅಂಗನವಾಡಿ ಕೇಂದ್ರ ಇಲ್ಲದ ಕಾರಣ ಅಲೆಮಾರಿ ಜನರ ಮಕ್ಕಳಿಗೆ ಅಂಗನವಾಡಿ ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಅಲೆಮಾರಿಗಳ ವಾಸ್ಯವ್ಯದ ಸ್ಥಳಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳು ನಮ್ಮ ದೇಶದ ಬಹುದೊಡ್ಡ ಸಂಪತ್ತು. ಅವರು ಸದೃಢರಾಗಿದ್ದರೆ ದೇಶ ಕೂಡ ಸದೃಢವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಬಹುದಿನಗಳಿಂದ ಶಿಕ್ಷಣದಿಂದ ವಂಚಿತರಾದ ಅಲೆಮಾರಿ ಸಮುದಾಯದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಅಂಗನವಾಡಿ ಆರಂಭಿಸಿರುವುದು ಒಳ್ಳೆಯ ಕಾರ್ಯ ಎಂದರು.

ಇಲ್ಲಿನ ಮಕ್ಕಳು ಸೇರಿದಂತೆ ಗರ್ಭಿಣಿಯರಿಗೆ ಕೂಡ ಪೌಷ್ಟಿಕ ಆಹಾರ ಸಿಗಬೇಕಿದೆ. ಈ ನಿಟ್ಟಿನಲ್ಲಿ ಇವರಿಗೆ ನಿಯಮಿತವಾಗಿ ಪೌಷ್ಟಿಕ ಆಹಾರ ಸಿಗಲು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಧಿಧೀಶರು ಅಧಿಕಾರಿಗಳಿಗೆ ಸಲಹೆ ನೀಡಿದರು. ಶಾಲೆಗೆ ಹೋಗದ ಮಕ್ಕಳ ಸಂಖ್ಯೆ ಎಷ್ಟು ಇದೆ ಎಂಬುದನ್ನು ತಿಳಿದು ಅವರಿಗೆ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಬಿಸಿಊಟ ಯೋಜನೆಯ ಸಹಾಯಕ ನಿರ್ದೇಶಕರಾದ ಸ್ಥಳದಲ್ಲಿದ್ದ ಗೀತಾ ಅವರಿಗೆ ಸೂಚಿಸಿದರು.

ಈ ವೇಳೆ ಶಿಶು ಅಭಿವೃದ್ಧಿ ಅಧಿಕಾರಿ ಮಚೇಂದ್ರ ವಾಘಮೋರೆ ಮಾತನಾಡಿ, ತಾವು ಇತ್ತೀಚೆಗೆ ಈ ಅಲೆಮಾರಿ ಸಮುದಾಯದವರನ್ನು ಭೇಟಿ ಮಾಡಿದ ವೇಳೆಯಲ್ಲಿ ಇಲ್ಲಿನ ಮಕ್ಕಳಿಗೆ ಅಂಗನವಾಡಿ ತೆರೆಯಲು ಸೂಚಿಸಿದ್ದರಿಂದ ನಾವು ತಡಮಾಡದೇ ಅದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಈ ಶ್ರೇಯಸ್ಸು ಮಾನ್ಯ ನ್ಯಾಯಾಧೀಶರಿಗೆ ಸಲ್ಲುತ್ತದೆ ಎಂದರು. ತಾವು ತಿಳಿಸಿದಂತೆ ಮೊನ್ನೆಯಿಂದಲೇ ನಾವು ಇಲ್ಲಿನ ಮಕ್ಕಳ ಮತ್ತು ಗರ್ಭಿಣಿಯರ ಸಮೀಕ್ಷೆ ಮಾಡಿದ್ದೇವೆ. ಇಲ್ಲಿನ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

ಈ ವೇಳೆ ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದ ಡಾ| ಅರ್ಚನಾ ಮಾತನಾಡಿ, ಆರೋಗ್ಯ ತುಂಬಾ ಮುಖ್ಯ. ತಾವು ಹತ್ತಿರದಲ್ಲಿರುವ ಆಸ್ಪತ್ರೆಗೆ ಕಾಲಕಾಲಕ್ಕೆ ಭೇಟಿ ನೀಡಿ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗರ್ಭಿಣಿಯರೊಂದಿಗೆ ಸಮಾಲೋಚನೆ: ಹತ್ತಾರು ಸಂಖ್ಯೆಯ ಭಾಗವಹಿಸಿದ್ದ ಅಲೆಮಾರಿ ಸಮುದಾಯದ ಗರ್ಭಿಣಿಯರಿಗೆ ಹಾಲು, ಚಿಕ್ಕೆ ವಿತರಿಸಿದರು. ಆರೋಗ್ಯದ ಬಗ್ಗೆ ನ್ಯಾಯಾಧೀಶರು ಗರ್ಭಿಣಿಯರೊಂದಿಗೆ ಮಾತನಾಡಿದರು. ನೀವು ಇನ್ನುಂದೆ ಪ್ರತಿದಿನ ಚಿಕ್ಕೆ, ಹಾಲು ಮತ್ತು ಮೊಟ್ಟೆಯನ್ನು ಸೇವಿಸಬೇಕು. ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಆರೋಗ್ಯ ತಪಾಸಣೆ: ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಆಕಾಶ ಬೂಯಾ, ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದ ಡಾ| ಅರ್ಚನಾ, ಡಾ| ನಿಷತ್‌ ಅವರು, ಅಲ್ಲಿ ಸೇರಿದ್ದ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಇಲ್ಲಿನ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ತಮಗೆ ವರದಿ ಸಲ್ಲಿಸಬೇಕು ಎಂದು ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಅಲೆಮಾರಿಗಳಲ್ಲಿ ಹರ್ಷ: ಬಾಂಡೆ ಸಾಮಾನು, ಬಟ್ಟೆ, ಡ್ರಮ್ಮು ಮಾರಾಟ, ಕುಲುಮೆ, ಪಂಚಾಂಗ ಹೇಳುವುದು, ಪೇಪರ್‌ ಆಯುವುದು ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದ ಅಲ್ಲಿನ ಅಲೆಮಾರಿಗಳಲ್ಲಿ ಹರ್ಷ ಕಾಣುತ್ತಿತ್ತು. ಅಂಗನವಾಡಿ ಶಿಕ್ಷಕಿಯ ಧ್ವನಿಗೆ ಧ್ವನಿಗೂಡಿಸುತ್ತಿದ್ದ ತಮ್ಮ ಮಕ್ಕಳ ಉತ್ಸಾಹವನ್ನು ಆ ಅಲೆಮಾರಿಗಳು ಸುತ್ತಲು ನಿಂತು ನೋಡುತ್ತಿದ್ದ ದೃಶ್ಯ ಕಂಡು ಬಂದಿತು.

ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ಸಮಾಜ ಸೇವಾ ಕಾರ್ಯಕರ್ತೆ ಶಾರದಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ, ಅಂಗನವಾಡಿ ಮೇಲ್ವಿಚಾರಕರಾದ ವಿಜಯಲಕ್ಷ್ಮೀ, ಮಹಾನಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕ ಶಂಕ್ರಪ್ಪ ಜನಕಟ್ಟಿ, ಆಶಾ ಕಾರ್ಯಕರ್ತೆಯರು, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next