Advertisement

ನ್ಯಾಯಾಧೀಶರಿಂದ ಅಲೆಮಾರಿಗಳ ಸ್ಥಿತಿಗತಿ ಪರಿಶೀಲನೆ

02:44 PM Jul 12, 2019 | Team Udayavani |

ಬೀದರ: ಅಲೆಮಾರಿ ಸಮುದಾಯದವರು ವಾಸ್ತವ್ಯ ಮಾಡಿದ ನೌಬಾದ್‌ ಬಳಿಯ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಅವರು ಗುರುವಾರ ಭೇಟಿ ನೀಡಿ ಅವರ ಸ್ಥಿತಿಗತಿ ಪರಿಶೀಲನೆ ನಡೆಸಿದರು.

Advertisement

ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶರ ಎದುರು, ಅಲೆಮಾರಿ ಸಮುದಾಯದ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ನಾವು 30 ವರ್ಷದಿಂದ ಇಂತಹ ಜೋಪಡಿಯಲ್ಲಿದ್ದೇವೆ. ನಮಗೆ ಇರಲು ಮನೆ ಕೊಟ್ಟರೆ ಸಾಕು ಮನವಿ ಮಾಡಿದರು. ನ್ಯಾಯಾಶರು ಮಾತನಾಡಿ, ತಾವು ಎಲ್ಲಿಂದ ಬಂದಿದ್ದೀರಿ? ಯಾವ ಕೆಲಸ ಮಾಡುತ್ತೀರಿ? ಸರ್ಕಾರದಿಂದ ಏನೇನು ಸೌಲಭ್ಯ ಸಿಕ್ಕಿದೆ? ತಮ್ಮ ಮಕ್ಕಳು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದರು. ಹುಮನಾಬಾದ, ಕಲಬುರಗಿ ಸೇರಿದಂತೆ ಬೇರೆ ರಾಜ್ಯದಿಂದಲೂ ಇಲ್ಲಿಗೆ ಬಂದಿರುವುದಾಗಿ ಅಲೆಮಾರಿಗಳು ಮಾಹಿತಿ ನೀಡಿದರು. ಪಾತ್ರೆ ಸಾಮಾನು, ಬಟ್ಟೆ, ಡ್ರಮ್‌ ಮಾರಾಟ, ಕುಲುಮೆ, ಪಂಚಾಂಗ ಹೇಳುವುದು, ಪೇಪರ್‌ ಆಯುವುದು ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದೇವೆ. ಶಾರದಾ ಅನ್ನುವವರು ನಮಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮಾಡಿಸಿಕೊಟ್ಟು ಸಹಾಯ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಮಕ್ಕಳಿಗಿಲ್ಲ ಅಂಗನವಾಡಿ: ನಮ್ಮ ಮಕ್ಕಳನ್ನು ಕಳುಹಿಸಲು ಹತ್ತಿರದಲ್ಲಿ ಅಂಗನವಾಡಿ ಇಲ್ಲ. ದೊಡ್ಡ ಮಕ್ಕಳನ್ನು ಕಳುಹಿಸಲು ಹತ್ತಿರದಲ್ಲಿ ಸರ್ಕಾರಿ ಶಾಲೆ ಇಲ್ಲ ಎಂದು ಅವರು ಅಳಲು ತೋಡಿಕೊಂಡರು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಭಿಕ್ಷಾಟನೆಗೆ ಕಳುಹಿಸಬಾರದು. ಇದು ಅವಮಾನದ ವಿಷಯ ಎಂದು ಅವರಲ್ಲಿ ಮನವಿ ಮಾಡಿದ ನ್ಯಾಯಾಧೀಶರು, 30 ವರ್ಷವಾದರೂ ಇಲ್ಲಿ ಅಂಗನವಾಡಿಯನ್ನೇಕೆ ತೆರೆದಿಲ್ಲ? ಯಾಕೆ ವಿಳಂಬ ಮಾಡಿದ್ದೀರಿ? ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸಮೀಕ್ಷೆ ಮಾಡಿದ್ದೇವೆ: ಇಲ್ಲಿನ ಮಕ್ಕಳಿಗೆ ಅಂಗನವಾಡಿ ವ್ಯವಸ್ಥೆ ಕಲ್ಪಿಸಲಾಗುವುದು. ಎಷ್ಟು ಮಕ್ಕಳು ಮತ್ತು ಗರ್ಭಿಣಿಯರು ಇದ್ದಾರೆ ಎಂದು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ತಾತ್ಕಾಲಿಕವಾಗಿ ಹತ್ತಿರದ ದೇವಾಲಯದಲ್ಲಿ ಅಂಗನವಾಡಿ ಆರಂಭಿಸಲು ಯೋಜಿಸಲಾಗಿದೆ. ಈ ಬಗ್ಗೆ ದೇವಾಲಯದ ಅರ್ಚಕರ ಜೊತೆಗೆ ಮಾತನಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ಬೀದರ ಸಿಡಿಪಿಒ ಮಚೇಂದ್ರ ವಾಗಮೋರೆ ನ್ಯಾಯಾಧೀಶರಿಗೆ ತಿಳಿಸಿದರು.

ವರದಿ ಸಲ್ಲಿಸಲು ಗಡುವು: ಇಲ್ಲಿ ಕೂಡಲೇ ಅಂಗನವಾಡಿ ತೆರೆಯಬೇಕು. ಇಲ್ಲಿನ ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುವುದಕ್ಕೆ ಕೂಡಲೇ ಕ್ರಮ ವಹಿಸಬೇಕು. ಇಲ್ಲಿನ ಮಕ್ಕಳು ಭಿಕ್ಷೆ ಬೇಡದಂತೆ ನೋಡಿಕೊಳ್ಳಬೇಕು. ತೆಗೆದುಕೊಂಡ ಕ್ರಮದ ಬಗ್ಗೆ ಒಂದು ತಿಂಗಳಲ್ಲಿ ಕಾನೂನು ಸೇವೆ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ನ್ಯಾಯಾಧೀಶರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

Advertisement

ಶೌಚಾಲಯ ವ್ಯವಸ್ಥೆ ಮಾಡಿ: ಇಲ್ಲಿನ ಜನರಿಗೆ ಇದುವರೆಗೆ ಶೌಚಾಲಯದ ವ್ಯವಸ್ಥೆಯನ್ನೇ ಮಾಡಿಲ್ಲ. ಬೆಳಗ್ಗೆ ಎಲ್ಲರೂ ಹತ್ತಿರದ ಬಯಲಲ್ಲಿ ಶೌಚ ಮಾಡುತ್ತಾರೆ. ಇದರಿಂದ ಸುತ್ತಲಿನ ಜನರಿಗೆ ಕಿರಿಕಿರಿಯಾಗುತ್ತಿದೆ ಎಂದು ಸುತ್ತಲಿನ ಕೆಲವು ನಿವಾಸಿಗಳು ತಿಳಿಸಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ, ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ ಇದ್ದರು. ಸಮಾಜ ಸೇವಾಕಾರ್ಯಕರ್ತೆ ಶಾರದಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಂಕ್ರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next