Advertisement

ಬೀದರ-ನಾಂದೇಡ ಹೊಸ ರೈಲು ಮಾರ್ಗ ಆರಂಭಿಸಿ

04:03 PM Sep 27, 2019 | Naveen |

ಬೀದರ: ಬೀದರ-ನಾಂದೇಡ ಮಧ್ಯೆ ಹೊಸ ರೈಲು
ಮಾರ್ಗ ಕಾರ್ಯಾರಂಭಕ್ಕೆ ಅಧಿಕಾರಿಗಳು ಕ್ರಮ
ವಹಿಸಬೇಕು ಎಂದು ಸಂಸದ ಭಗವಂತ ಖೂಬಾ
ಸೂಚಿಸಿದರು.

Advertisement

ಸಿಕಂದ್ರಾಬಾದನಲ್ಲಿ ಗುರುವಾರ ನಡೆದ ದಕ್ಷಿಣ ಮಧ್ಯ ರೈಲ್ವೆ ಸಭೆಯಲ್ಲಿ ಮಾತನಾಡಿದ ಅವರು, ಬೀದರ ಮೂರು ರಾಜ್ಯಗಳಿಗೆ ಸಂಪರ್ಕ ಸಾಧಿಸುವ ಜಿಲ್ಲೆಯಾಗಿದೆ. ಎಲ್ಲ ರೈಲ್ವೆಗಳು ಬೀದರ ನಗರದಿಂದ ತೆರಳುತ್ತವೆ. ಆದ್ದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನೂಕುಲಕರವಾಗಲಿದೆ.

ಹಾಗಾಗಿ ಬೀದರ-ನಾಂದೇಡ ಹೊಸ ರೈಲು ಮಾರ್ಗಕ್ಕೆ ಎರಡು ಸಾವಿರ ಕೋಟಿ ರೂ. ಯೋಜನೆ ಇದ್ದು, ಈ ಬಗ್ಗೆ ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಬೀದರ-ಹುಬ್ಬಳ್ಳಿ ಮಧ್ಯೆ ಹೊಸ ರೈಲು ಸಂಚಾರ ಪ್ರಾರಂಭಿಸುವ ಕುರಿತು ಚರ್ಚೆ ನಡೆದಿದೆ. ಬೀದರ ವಾಯಾ ಸಿಕಂದ್ರಾಬಾದ ಮೂಲಕ ಹುಬ್ಬಳ್ಳಿಗೆ ತೆರಳುವ ಹೊಸ ರೈಲು ಪ್ರಾರಂಭಕ್ಕೆ ಅಧಿಕಾರಿಗಳು ಹೆಚ್ಚಿನ ಮುತ್ತುವರ್ಜಿ ವಹಿಸಬೇಕು ಎಂದು ಸಂಸದ ಖೂಬಾ ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈ ಯೋಜನೆ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿ ಮಾರ್ಗವಾಗಿ ಬೀದರ-ಯಶವಂತಪುರ ರೈಲನ್ನು ಕೂಡಲೇ ಆರಂಭಿಸಲು ಅಧಿಕಾರಿಗಳು ಮುಂದಾಗಬೇಕು. ಈ ರೈಲು ಕಳೆದ ಲೋಕಸಭೆ ಚುನಾವಣೆ ಹಾಗೂ ಗಣೇಶ ಹಬ್ಬದಲ್ಲಿ ಯಶಸ್ವಿಯಾಗಿ ಸಂಚಾರ ನಡೆಸಿದೆ. ಯಾವ ಕಾರಣಕ್ಕೆ ಈ ರೈಲು ಸಂಚಾರಕ್ಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೆಲ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿವೆ. ಕೂಡಲೇ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬೀದರ-ಯಶವಂತಪುರ ರೈಲು ಸಂಚಾರ ಆರಂಭ ಆಗುವ ನಿಟ್ಟಿನಲ್ಲಿ ಕ್ರಮ ವಹಿಸಿ ಈ ಕುರಿತು ವರದಿ ನೀಡುವಂತೆ ಸಂಸದ ಖೂಬಾ ಅಧಿಕಾರಿಗಳಿಗೆ ಸೂಚಿಸಿದರು.

ಬೀದರ ಜಿಲ್ಲೆಯ ವಿವಿಧಡೆ ರೈಲ್ವೆ ಸೇತುವೆಗಳ ಕೆಳಗೆ ಮಳೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಆಗುತ್ತಿರುವ ಸಮಸ್ಯೆಗೆ ಬಗೆಹರಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಸೇರಿದಂತೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next