ಬೀದರ: ಚುನಾವಣೆಯಲ್ಲಿ ಮತಕ್ಕಾಗಿ ಗ್ರಾಮೀಣ ಜನರ ಮನೆಬಾಗಿಲಿಗೆ ತೆರಳಿ ಮತದಾರರ ಕಾಲಿಗೆ ಬೀಳುವ ರಾಜಕಾರಣಿಗಳು ಇದೀಗ ಬರಕ್ಕೆ ತುತ್ತಾಗಿರುವ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಜನರ ಕಷ್ಟ ಆಲಿಸುವ ಬದಲು ಅಧಿಕಾರಕ್ಕಾಗಿ ರೆಸಾರ್ಟ್ ರಾಜಕೀಯದಲ್ಲಿ ತೊಡಗಿರುವುದು ಜಿಲ್ಲೆಯ ಜನರ ಆಕ್ರೋಷಕ್ಕೆ ಕಾರಣವಾಗಿದೆ.
Advertisement
ಮುಂಗಾರು ಮಳೆ ಇಲ್ಲದೇ ಬೆಳೆಗಳು ನೆಲಕಚ್ಚುವ ಲಕ್ಷಣಗಳು ಗೋಚರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ, ಜನಸಾಮಾನ್ಯರಿಗೆ ಧೈರ್ಯ-ಸ್ಥೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಐಷಾರಾಮಿ ರೆಸಾರ್ಟ್ ಕಡೆಗೆ ಮುಖ ಮಾಡಿರುವ ಜಿಲ್ಲೆಯ ಜನರು ರಾಜಕಾರಣಿಗಳ ನಡೆಗೆ ಛೀಮಾರಿ ಹಾಕುವಂತಾಗಿದೆ. ಬರದಿಂದ ತತ್ತರಿಸಿರುವ ಗ್ರಾಮಗಳ ಕಡೆಗೆ ಸಚಿವರು, ಶಾಸಕರು ಭೇಟಿ ನೀಡಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿತ್ತು. ಆದರೆ, ಇಂದು ಯಾರೂ ಯಾರ ಕೈಗೂ ಸಿಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
Related Articles
Advertisement
ಮೋಡ ಬಿತ್ತನೆ ಕಾರ್ಯ ಮಾಡಿ: ಮುಂಗಾರು ಆರಂಭಾಗಿ ಒಂದೂವರೆ ತಿಂಗಳು ಕಳೆದಿದ್ದು, ಜಿಲ್ಲೆಯ ರೈತರು ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡುವಂತೆ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.60ರಷ್ಟು ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಮುಂದಿನ 15 ದಿನಗಳಲ್ಲಿ ಮಳೆ ಸುರಿಯದಿದ್ದರೆ ರೈತರು ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಮೋಡದ ವಾತಾವರಣ ಇದೆ. ಜಿಲ್ಲಾಡಳಿತ, ಜಿಲ್ಲೆಯ ಸಚಿವರು ಮೋಡ ಬಿತ್ತನೆ ಕಾರ್ಯ ಮಾಡಿದರೆ ಕುಡಿವ ನೀರು, ರೈತರ ಕೃಷಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆಡಳಿತ ಮುಂದಾಗಬೇಕು ಎಂಬ ಅನಿಸಿಕೆಯನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಕುಡಿಯುವ ನೀರಿನ ಭೀಕರತೆ ಹೆಚ್ಚಲಿದೆ. ಈಗಾಗಲೇ ಟ್ಯಾಂಕರ್ ಮೂಲಕ ಪೂರೈಕೆ ಮಾಡುತ್ತಿರುವ ಕಡೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಟ್ಯಾಂಕರ್ ನೀರು ಪೂರೈಕೆಗೂ ಸಮಸ್ಯೆ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಭಾವಿ ವ್ಯಕ್ತಿಗಳ ಬಾವಿಗಳನ್ನು ಸರ್ಕಾರದಿಂದ ವಶಕ್ಕೆ ಪಡೆದು ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವ ಗ್ರಾಮದಲ್ಲಿ ಯಾರ ಭೂಮಿಯಲ್ಲಿ ನೀರು ಇದೇಯೊ ಎಂದು ಗುರುತಿಸುವ ಕಾರ್ಯ ನಡೆದಿದ್ದು, ಅವುಗಳನ್ನು ವಶಕ್ಕೆ ಪಡೆದು ಜನರಿಗೆ ನೀರು ಪೂರೈಸಲಾಗುವುದು.• ರಾಚಪ್ಪಾ ಪಾಟೀಲ,
ಗ್ರಾಮೀಣ ಕುಡಿಯುವ ನೀರು ಅಧಿಕಾರಿ ಜಿಲ್ಲೆಯಲ್ಲಿ ಬರದಿಂದ ಜನ, ಜಾನುವಾರು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಉಳಿಯುವ ಶಾಸಕರು, ಸಚಿವರು ಜಿಲ್ಲೆಗೆ ಆಗಮಿಸಿ ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಜನರ ಹಣೆ ಬರಹ ಬದಲಿಸಬೇಕಾದ ಸರ್ಕಾರ ಇಂದು ಅಧಿಕಾರದ ಆಸೆಗಾಗಿ ಜನರ ಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಕ್ಷೇತ್ರದ ಜನರ ಕಷ್ಟಕ್ಕಿಂತ ಶಾಸಕರಿಗೆ ಅವರ ಅಧಿಕಾರವೇ ಮುಖ್ಯವಾಗಿದ್ದು ದುರದುಷ್ಟಕರ ಸಂಗತಿಯಾಗಿದೆ. ದುಡ್ಡು, ಅಧಿಕಾರದ ಆಸೆಗೆ ಶಾಸಕರು ಹೆಚ್ಚು ಒತ್ತು ನೀಡುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಜನರ ಕಷ್ಟಗಳು ಹೆಚ್ಚಾಗಲಿವೆ ಎಂಬ ಭಯ ಕಾಡುತ್ತಿದೆ. ಸಧ್ಯ ಎರಡು ವರ್ಷಗಳಿಂದ ಬರದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಮೋಡದ ವಾತಾವರಣ ಇದೆ. ಜಿಲ್ಲೆಯಲ್ಲಿ ಮೂರು ಜನ ಸಚಿವರು ಇದ್ದಾರೆ. ಸರ್ಕಾರದಿಂದ ಮೋಡ ಬಿತ್ತನೆ ಮಾಡಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ, ಈ ಕಾರ್ಯ ಮಾಡಲು ನಮ್ಮ ಜಿಲ್ಲೆಯ ಸಚಿವರಿಗೆ ಆಗುತ್ತಿಲ್ಲ. ಪದೆಪದೆ ಬರಕ್ಕೆ ತುತ್ತಾಗುತ್ತಿರುವ ಹಾಗೂ ಹಿಂದುಳಿದ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.
• ಮಲ್ಲಿಕಾರ್ಜುನ ಸ್ವಾಮಿ,
ರೈತ ಸಂಘದ ಜಿಲ್ಲಾಧ್ಯಕ್ಷರು