Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ

01:26 PM Aug 10, 2019 | Naveen |

ಬೀದರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಎದುರಾದಲ್ಲಿ, ಪ್ರವಾಹ ಪರಿಸ್ಥಿತಿ ಎದುರಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್‌. ಮಹಾದೇವ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜರುಗಿತು.

Advertisement

ಮಳೆಯಿಂದ ಬೆಳೆಹಾನಿ, ಮನೆ ಕುಸಿತ, ಜೀವಹಾನಿ, ಸಾಂಕ್ರಾಮಿಕ ರೋಗ, ಶಾಲಾ ಕಟ್ಟಡ ಹಾಗೂ ವಿದ್ಯುತ್‌ ಕಂಬಗಳ ಹಾನಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಯಿತು.

ಜಿಲ್ಲೆಯ ಸಹಾಯಕ ಆಯುಕ್ತರು, ಎಲ್ಲ ತಹಶೀಲ್ದಾರರು, ನಗರಾಭಿವೃದ್ಧಿ ಕೋಶ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಕೆಲವು ದಿನಗಳ ಹಿಂದಷ್ಟೇ ಪ್ರಕೃತಿ ವಿಕೋಪದ ಬಗ್ಗೆ ತರಬೇತಿ ಪಡೆದ ಅಧಿಕಾರಿಗಳನ್ನೊಳಗೊಂಡ ತಂಡವೊಂದನ್ನು ಕೂಡಲೇ ರಚಿಸಬೇಕು. ಪ್ರಕೃತಿ ವಿಕೋಪ ಎದುರಾಗುವ ಮುನ್ನ ಯಾವ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲರೂ ಸೇರಿ ವಾರದೊಳಗೆ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಯಾ ತಾಲೂಕುಗಳಲ್ಲಿ ಯಾವ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮನೆ ಕುಸಿತ, ಜೀವಹಾನಿ ವಿವರ ಸೇರಿದಂತೆ ತೀವ್ರ ಮಳೆಯಿಂದಾಗುವ ಪರಿಣಾಮದ ಎಲ್ಲ ವಿವರವನ್ನು ಪ್ರತಿಕ್ಷಣ ಜಿಲ್ಲಾಡಳಿತಕ್ಕೆ ನೀಡುತ್ತಿರಬೇಕು ಎಂದು ಜಿಲ್ಲಾಧಿಕಾರಿ ಎಲ್ಲ ತಾಲೂಕುಗಳ ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲೆಯ ಯಾವಯಾವ ಕಡೆಗಳಲ್ಲಿ ಪ್ರವಾಹ ಬರಬಹುದು ಎಂಬುದರ ಬಗ್ಗೆ ನಾವು ಮುಂಚಿತ ತಿಳಿದಿರಬೇಕು. ಅಂತಹ ಕಡೆಗಳಲ್ಲಿ ಗಂಜಿ ಕೇಂದ್ರ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ತೀವ್ರ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ತಹಶೀಲ್ದಾರರು, ಆರೋಗ್ಯ ಇಲಾಖಾಧಿಕಾರಿಗಳು, ಪೊಲೀಸ್‌, ಅಗ್ನಿಶಾಮಕ, ಜೆಸ್ಕಾಂ ಅಧಿಕಾರಿಗಳು ಜಾಗೃತಿ ವಹಿಸಬೇಕು. ಹೀಗಾಗಿ ಆಯಾ ಇಲಾಖೆಗಳ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ರಕ್ಷಣಾ ಸಾಮಗ್ರಿ ಸಿದ್ಧವಾಗಿರಲಿ: ಜಿಲ್ಲೆಗೆ ಬೇರೆ ಕಡೆಯಿಂದ ದಿಢೀರ್‌ ಮಳೆ ನೀರು ನುಗ್ಗಿ ಬಂದಲ್ಲಿ ಆಗ ತತಕ್ಷಣ ಏನು ಮಾಡಬೇಕು. ಕೆರೆಗಳು ಒಡೆದಲ್ಲಿ ಯಾವ ಮಾರ್ಗ ಅನುಸರಿಸಬೇಕು ಎಂಬುದರ ಬಗ್ಗೆ ನಾವು ತಿಳಿದುಕೊಂಡಿರಬೇಕು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಾಮಗ್ರಿಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದರು.

ಎಚ್ಚರಿಕೆ ವಹಿಸೋಣ: ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಕಳೆದ 50 ವರ್ಷಗಳಲ್ಲಿ ಒಮ್ಮೆಯೂ ಆಗದಷ್ಟು ಮಳೆ ಬೀಳುತ್ತಿದೆ. ಹೀಗಾಗಿ ನಾವು ನಮ್ಮ ಜಿಲ್ಲೆಯಲ್ಲಿ ಎಲ್ಲ ರೀತಿಯಿಂದ ಸಿದ್ಧರಾಗಿರೋಣ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next