ಬೀದರ: ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರು ಪೂರೈಕೆ ಮಾಡುವ ಕಾರಂಜಾ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗುತ್ತಿದ್ದು, ಸದ್ಯ ಜಲಾಶಯದಲ್ಲಿ 0.917 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿರುವ ಸಂಗತಿ ಬೆಳಕಿಗೆ ಬಂದಿದೆ.
Advertisement
ಎರಡು ವರ್ಷಗಳಿಂದ ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಔರಾದ, ಭಾಲ್ಕಿ, ಬೀದರ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಹೆಚ್ಚಿದೆ. ಅಲ್ಲದೆ ಬಸವಕಲ್ಯಾಣ, ಹುಮನಾಬಾದ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಈ ವರ್ಷ ಬೇಸಿಗೆಯ ಮುನ್ನದಿಂದ ಔರಾದ ಹಾಗೂ ಭಾಲ್ಕಿ ತಾಲೂಕಿನಲ್ಲಿ ನೀರಿನ ಬರ ಹೆಚ್ಚಿತ್ತು. ಮಳೆಗಾಲ ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಕೂಡ ನಿಗದಿತ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ಇಂದಿಗೂ ಆ ತಾಲೂಕುಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ.
Related Articles
Advertisement
ಒಳ ಹರಿವಿನ ಪ್ರಮಾಣ ಕಡಿಮೆ: ಮುಂಗಾರು ಆರಂಭಗೊಂಡ ನಂತರ ಈ ವರೆಗೆ ಕಾರಂಜಾ ಜಲಾಶಯಕ್ಕೆ ಕೇವಲ 0.088 ಟಿಎಂಸಿ ನೀರು ಒಳ ಹರಿವು ಬಂದಿದೆ. ಈ ಜಲಾಶಯಕ್ಕೆ ಶೇ.60ರಷ್ಟು ಒಳ ಹರಿವು ತೆಲಂಗಾಣದಿಂದ ಬರುತ್ತದೆ. ಇನ್ನುಳಿದ ಶೇ.40ರಷ್ಟು ಜಿಲ್ಲೆಯ ವಿವಿಧೆಡೆಯಿಂದ ನೀರು ಹರಿದು ಜಲಾಶಯಕ್ಕೆ ಸೇರುತ್ತದೆ. ಆದರೆ, ಮಳೆ ಕೊರತೆ ಹಿನ್ನೆಲೆಯಲ್ಲಿ ತೆಲಂಗಾಣದಿಂದ ಅಥವಾ ಜಿಲ್ಲೆಯಿಂದ ಭಾರಿ ಪ್ರಮಾಣದ ಒಳ ಹರಿವು ಬಂದಿಲ್ಲ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತರ್ಜಲ ಮಟ್ಟ ಕುಸಿತ: 2 ವರ್ಷದಿಂದ ಮಳೆ ಕೊರತೆ ಕಾಣರ ಜಿಲ್ಲೆಯಲ್ಲಿನ ಕೊಳವೆಬಾವಿ ಹಾಗೂ ತೆರೆದ ಭಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದ ಕೃಷಿ ಹಾಗೂ ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಹುತೇಕ ಕೆರೆಗಳು ಕೂಡ ಒಣಗಿ, ಹನಿ ನೀರಿಗಾಗಿ ಬಾಯ್ತೆರೆದು ಕಾದಿವೆ. ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿ ರಾಚಪ್ಪ ಪಾಟೀಲ ಅವರ ಪ್ರಕಾರ ಈ ವರ್ಷ ಜಿಲ್ಲೆಯ ವಿವಿಧೆಡೆ ಸುಮಾರು 500ರಷ್ಟು ಕೊಳವೆ ಭಾವಿಗಳನ್ನು ಕೊರೆಸಿದ್ದು, ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇದೆ. ಅಲ್ಲದೆ, ಹೆಚ್ಚು ಆಳದಲ್ಲಿ ನೀರು ಇದ್ದರೂ ಕೂಡ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಾರಂಜಾ ಜಲಾಶಯದಲ್ಲಿ ಸಧ್ಯ 0.917 ಟಿಎಂಸಿ ನೀರು ಜಿಲ್ಲೆಯ ಜನರಿಗೆ ಉಪಯೋಗಕ್ಕೆ ಸಾಧ್ಯವಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಂದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ನೀರು ಪೂರೈಕೆ ಸಾಧ್ಯವಾಗುತ್ತದೆ. ದೇವರ ಕೃಪೆಯಿಂದ ಉತ್ತಮ ಮಳೆ ಆದರಷ್ಟೇ ಜಿಲ್ಲೆಯ ಜನರಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗುವುದಿಲ್ಲ.• ಆನಂದಕುಮಾರ,
ಕಾರಂಜಾ ಜಲಾಶಯದ ಅಧಿಕಾರಿ