Advertisement

ಅನುದಾನ ಮೊಟಕು ಗೊಂದಲಕ್ಕೆ ತೆರೆ

11:49 AM Mar 06, 2020 | Naveen |

ಬೀದರ: ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪಕ್ಕೆ ಅನುದಾನ ಮಿತಿಯನ್ನು ಕೇವಲ 50 ಕೋಟಿ ರೂ.ಗಳಿಗೆ ಸೀಮಿತಗೊಳಿಸಿ ಬಸವಾನುಯಾಯಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದ ಸಿಎಂ ಯಡಿಯೂರಪ್ಪ ಸರ್ಕಾರ ಬಜೆಟ್‌ನಲ್ಲಿ ಪ್ರಸಕ್ತ ವರ್ಷಕ್ಕೆ 100 ಕೋಟಿ ರೂ. ಮೀಸಲಿಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

Advertisement

ಬಸವಣ್ಣನ ವಿಚಾರ ಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ದಿಸೆಯಲ್ಲಿ ಬಸವಣ್ಣನ ಕರ್ಮಭೂಮಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಂಗಡ ಪತ್ರದಲ್ಲಿ 500 ಕೋಟಿ ರೂ. ಪ್ರಕಟಿಸಿ, ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 100 ಕೋಟಿ ರೂ. ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಫೆ. 7ರಂದು ಬೀದರ ಪ್ರವಾಸ ವೇಳೆ ಸಿಎಂ ಬಿಎಸ್‌ವೈ ಆಶ್ವಾಸನೆ ನೀಡಿದಂತೆ ಅನುದಾನ ಕಲ್ಪಿಸಿರುವುದು ಬಸವ ಭಕ್ತರಲ್ಲಿ ಸಂತಸ ತಂದಿದೆ.

ವಿಶ್ವವೇ ಗಮನ ಸೆಳೆಯುವಂತೆ ನೂತನ ಅನುಭವ ಮಂಟಪ ನಿರ್ಮಿಸಲು ಹಿರಿಯ ವಿದ್ವಾಂಸ ಗೊರುಚ ನೇತೃತ್ವದ ತಜ್ಞರ ಸಮಿತಿ 600 ಕೋಟಿ ರೂ. ವೆಚ್ಚದ ಯೋಜನಾ ವರದಿ ಸಲ್ಲಿಸಿ, ಪ್ರತಿ ವರ್ಷ 100 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಮನವಿಸಿತ್ತು.

ವರದಿ ಅನ್ವಯ ಅಗತ್ಯ ಅನುದಾನ ನೀಡುವುದಾಗಿ ಆಶ್ವಾಸನೆ ನೀಡಿದ್ದ ಹಿಂದಿನ ಮೈತ್ರಿ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ಬಳಿಕ ಬಿಜೆಪಿ ಸರ್ಕಾರ 50 ಕೋಟಿ ರೂ. ಮಂಜೂರು ಮಾಡಿ, ಸದ್ಯಕ್ಕೆ ಕಾಮಗಾರಿ ಆರಂಭಿಸಲು 20 ಕೋಟಿ ರೂ. ಬಿಡುಗಡೆಗೆ ಆದೇಶಿಸಿತ್ತು. ಆದರೆ, ನಂತರ ಉಲ್ಟಾ ಹೊಡೆದಿದ್ದ ಸರ್ಕಾರ ಪ್ರಸ್ತಾಪಿತ 600 ಕೋಟಿ ರೂ. ವೆಚ್ಚದ ಯೋಜನೆಯ ಗಾತ್ರವನ್ನು 50 ಕೋಟಿ ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕೆಂದು ಷರತ್ತು ಹಾಕಿ ಆದೇಶಿಸಿದ್ದು ಬಸವ ಭಕ್ತರಲ್ಲಿ ಗೊಂದಲ ಮೂಡಿಸಿತ್ತು.

ಈ ವಿಷಯದಲ್ಲಿ ಬೇಸರ ವ್ಯಕ್ತಪಡಿಸಿದ್ದ ವಿದ್ವಾಂಸ ಗೊರುಚ, ಸರ್ಕಾರದ ನಿರ್ಣಯದಿಂದ ಮೂಲ ಆಶಯಕ್ಕೆ ಧಕ್ಕೆ ಆಗಲಿದೆ. ಹಾಗಾಗಿ ಸ್ಪಷ್ಟೀಕರಣದ ಹೊಸ ಆದೇಶ ಹೊರಡಿಸಬೇಕೆಂದು ಸಿಎಂಗೆ ಆಗ್ರಹಿಸಿದ್ದರು.

Advertisement

ಉಸ್ತುವಾರಿ ಸಚಿವರು ಸೇರಿ ಜಿಲ್ಲೆಯ ಶಾಸಕರು ಅನುದಾನ ವಿಷಯದಲ್ಲಿನ ಗೊಂದಲ ಗಳನ್ನು ಪರಿಹರಿಸುವ ಮಾತುಗಳನ್ನಾಡಿದ್ದರು. ಈಗ ಸಿಎಂ ಯಡಿಯೂರಪ್ಪ ಬಜೆಟ್‌ನಲ್ಲಿ
ಅನುಭವ ಮಂಟಪಕ್ಕೆ ಪ್ರಸಕ್ತ ಸಾಲಿಗೆ 100 ಕೋಟಿ ರೂ. ಅನುದಾನ ಒದಗಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ, 600 ಕೋಟಿ ರೂ. ವೆಚ್ಚದ ಯೋಜನಾ ಗಾತ್ರವನ್ನು 500 ಕೋಟಿ ರೂ.ಗಳಿಗೆ ಸೀಮಿತ ಮಾಡಿದ್ದಾರೆ.

ಆರಂಭಿಕವಾಗಿ ಒದಗಿಸಿರುವ 100 ಕೋಟಿ ರೂ. ಹಣ ಖರ್ಚು ಆದ
ನಂತರ ಹಂತ ಹಂತವಾಗಿ ಅನುದಾನ ಲಭ್ಯವಾಗಲಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಶೀಘ್ರ ಅನುದಾನ ಬಿಡುಗಡೆ ಮಾಡಿ
ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ. ಬಸವಕಲ್ಯಾಣವನ್ನು ಅಂತಾರಾಷ್ಟ್ರೀಯ ತಾಣವನ್ನಾಗಿ ರೂಪಿಸಿ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿಸಬೇಕಿದೆ. ಆ ಮೂಲಕ ಬಸವ ತತ್ವವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಿದೆ.

ವಿಶ್ವಕ್ಕೆ ಪ್ರಥಮ ಪ್ರಜಾಪ್ರಭುತ್ವ ನೀಡಿರುವ ಅನುಭವ ಮಂಟಪವನ್ನು ವಿಶ್ವದ ಜನರು ಬಸವಕಲ್ಯಾಣಕ್ಕೆ ಬಂದು ನೋಡುವ ರೀತಿಯಲ್ಲಿ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಗೊರುಚ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಂತೆ ಸಿಎಂ ಬಿಎಸ್‌ವೈ ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಕಾಯಕ-ದಾಸೋಹದ ಮೂಲಕ ಹೇಗೆ ಗಳಿಸಬೇಕು ಹೇಗೆ ಬಳಸಬೇಕು ಎಂಬ ವಿಧಾನ ಕಲಿಸಿಕೊಟ್ಟ ಅನುಭವಮಂಟಪಕ್ಕೆ ಗೌರವ ಸಿಕ್ಕಿದ್ದು ಖುಷಿ ಆಗಿದೆ. ಬಸವ ಭಕ್ತರ ಪರವಾಗಿ ಸಿಎಂಗೆ ಅಭಿನಂದಿಸುವೆ.
ಡಾ| ಬಸವಲಿಂಗ ಪಟ್ಟದ್ದೇವರು,
ಅಧ್ಯಕ್ಷರು, ಅನುಭವ ಮಂಟಪ

ಶಶಿಕಾಂತ ಬಂಬುಳಗೆ 

Advertisement

Udayavani is now on Telegram. Click here to join our channel and stay updated with the latest news.

Next