Advertisement

ಪ್ರಾಮಾಣಿಕ ರಾಜಕಾರಣದ ಹಿರಿಯ ಕೊಂಡಿ ಆಗಿದ್ದವರು ಎ.ಜಿ. ಕೊಡ್ಗಿ

01:42 AM Jun 14, 2022 | Team Udayavani |

ರಾಜಕೀಯ, ಕೃಷಿ, ಸಮಾಜಸೇವೆ… ಹೀಗೆ ಎಲ್ಲ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ, ಪ್ರಾಮಾಣಿಕ ರಾಜಕಾರಣದ ಹಿರಿಯ ಕೊಂಡಿ ಆಗಿದ್ದವರು ಎ.ಜಿ. ಕೊಡ್ಗಿ.

Advertisement

ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು, ಸಮಬಾಳು, ಸಮಪಾಲಿಗೆ ಪ್ರಾಧಾನ್ಯತೆ ನೀಡಿ, ಭೂಸುಧಾರಣೆ ಯಂತಹ ಕಾಯ್ದೆ ತರುವಲ್ಲಿ ದಿ| ದೇವರಾಜ ಅರಸರ ಹೆಗಲಿಗೆ ಹೆಗಲು ಕೊಟ್ಟು ದುಡಿದ, ಸಾಮಾ ಜಿಕ ನ್ಯಾಯದ ಪ್ರತಿಪಾದನೆಗೆ ಹೋರಾಡಿದ ಬೆರಳೆಣಿಕೆಯ ರಾಜ ಕಾರಣಿಗಳಲ್ಲಿ ಕೊಡ್ಗಿಯವರೊಬ್ಬರು.

ಸ್ವತಃ ಕೊಡ್ಗಿಯವರ ತಂದೆ ಕೃಷ್ಣರಾಯ ಕೊಡ್ಗಿಯವರು ಅಪಾರ ಭೂ ಹಿಡುವಳಿ ಹೊಂದಿದ್ದು, ಸಾಕಷ್ಟು ಶ್ರೀಮಂತ ರಾಗಿದ್ದರು. ಆದರೆ ಎ.ಜಿ. ಕೊಡ್ಗಿಯವರು ತಮ್ಮೆಲ್ಲ ಆಸ್ತಿಪಾಸ್ತಿಗಳಿಗೆ ಬಡವರಿಂದ ಡಿಕ್ಲರೇಶನ್‌ ಕೊಡಿಸಿ ಕೂಲಿ ಮಾಡುವವರನ್ನೂ ಭೂ ಒಡೆಯರನ್ನಾಗಿ ಮಾಡಿ ಅಶಕ್ತರ ಬದುಕಿಗೆ ಹೊಸ ರೂಪ ಕೊಟ್ಟಿದ್ದರು.

ನಿಷ್ಠುರ ನಿಲುವು, ನೇರ ಮಾತು, ಕಂಡದ್ದನ್ನು ಕಂಡಂತೆ ಹೇಳುವ ಶಕ್ತಿ ಕೊಡ್ಗಿಯವರಲ್ಲಿ ಮನೆ ಮಾಡಿತ್ತು. ಆ ಕಾರಣಕ್ಕಾಗಿ ಕೊಡ್ಗಿಯವರು ಎಲ್ಲರಿಗೂ ಸಲ್ಲಬಹುದಾದ ವ್ಯಕ್ತಿತ್ವದ ನಡುವೆಯೂ ಅಲ್ಲಲ್ಲಿ ಸಹಜವಾದ ಅಭಿಪ್ರಾಯ ಬೇಧಗಳಿಗೆ ಒಗ್ಗಿಕೊಳ್ಳುತ್ತಾರೆ.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಮೂಲಕ 2 ಬಾರಿ ಶಾಸಕರಾದ ಕೊಡ್ಗಿಯವರು 1992ರ ಸುಮಾರಿಗೆ ಬಿಜೆಪಿ ಸೇರಿದ್ದರು. ಕೊಡ್ಗಿಯವರನ್ನು ಅತೀ ಸನಿಹದಿಂದ ಕಂಡ ನನಗೆ ಅನ್ನಿಸಿದ್ದು, “ಸತ್ಯಾನ್ವೇಷಣೆಗಾಗಿ ಮತ್ತು ನಂಬಿದ ಸಿದ್ಧಾಂತಕ್ಕಾಗಿ ರಾಜಕಾರಣವೂ ಸೇರಿದಂತೆ ಬದುಕು ಸಾಗಿಸಿದ ಅಪರೂಪದ ವ್ಯಕ್ತಿ’. ಕೊಡ್ಗಿಯವರ ಒಂದೊಂದು ಹೆಜ್ಜೆಯೂ ಇಂದಿನ ರಾಜಕಾರಣಿಗಳು ಹಿಂದಿರುಗಿ ನೋಡುವಂತೆ ದಾಖಲಾಗಿಬಿಟ್ಟಿವೆ.

Advertisement

ವಾರಾಹಿ ಮೂಲಕ ಸಮುದ್ರ ಸೇರುವ ನೀರನ್ನು ಸೌಭಾಗ್ಯ ಸಂಜೀವಿನಿ ಯೋಜನೆಯ ಮುಖಾಂತರ ಅವಳಿ ಜಿಲ್ಲೆಗಳಲ್ಲಿ ನದಿ ಜೋಡಣೆಯ ಕಾ‍ರ್ಯಕ್ರಮವನ್ನು ಕೊಡ್ಗಿ 20 ವರ್ಷಗಳ ಹಿಂದೆಯೇ ರೂಪಿಸಿದ್ದರು. ಜಾರ್ಜ್‌ ಫೆರ್ನಾಂಡಿಸ್‌, ಆಸ್ಕರ್‌ ಫೆರ್ನಾಂಡಿಸ್‌ ಸಹಿತ ಅಂದಿನ ಮುಖ್ಯಮಂತ್ರಿ ಯಡಿಯರಪ್ಪನವರ ತನಕ ಯೋಜನೆಯ ಸ್ವರೂಪವನ್ನು ಸರಕಾರ ಒಪ್ಪಿಕೊಂಡಿತು. ದುರದೃಷ್ಟಕ್ಕೆ ಕೊಡ್ಗಿಯವರ ಇಚ್ಛಾಶಕ್ತಿಯ ಪರವಾಗಿ ಧ್ವನಿಗೂಡಿಸುವಲ್ಲಿ ಗಟ್ಟಿತನದ ನಿಲುವು ವ್ಯಕ್ತವಾಗುವುದು ವಿಳಂಬವಾಗಿದ್ದರಿಂದ ಅವಳಿ ಜಿಲ್ಲೆಗಳ ಏತ ನೀರಾವರಿ ಯೋಜನೆ ವಿಳಂಬವಾದದ್ದು ಸತ್ಯ.

ಗ್ರಾ.ಪಂ. ಆಡಳಿತ- ಹೊಸ ಕಲ್ಪನೆ
ಸಹಕಾರಿ ಕ್ಷೇತ್ರದಲ್ಲಿ ಕೊಡ್ಗಿಯವರ ಶ್ರಮ ಅಸಾಧಾರಣ. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಕೊಡ್ಗಿಯವರು ತನ್ನನ್ನು ತೊಡಗಿಸಿಕೊಂಡ ರೀತಿಯಿಂದಾಗಿ ಕರ್ನಾಟಕ ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಹಣಕಾಸು ಆಯೋಗದ ನೇತೃತ್ವ ವಹಿಸಿದ ಕೊಡ್ಗಿ ರಾಜ್ಯದ ಮೂಲೆ ಮೂಲೆಯಲ್ಲಿ ತಿರುಗಾಟ ಮಾಡಿ ಪ್ರತೀ ಗ್ರಾಮ ಪಂಚಾಯತ್‌ಗಳು ಒಂದು ಸರಕಾರದಂತೆ ಕೆಲಸ ಮಾಡುವುದು ಹೇಗೆ ಎಂಬ ಹೊಸ ಕಲ್ಪನೆಯನ್ನು ಸೃಷ್ಟಿ ಮಾಡಿ ಪಂಚಾಯತ್‌ ಪ್ರತಿನಿಧಿಗಳ ಮುಂದಿಟ್ಟಿದ್ದರು.

ಚಕ್ರವ್ಯೂಹ ಭೇದಿಸುವ ಛಲಗಾರ
ಕೊಡ್ಗಿಯವರ ರಾಜಕಾರಣದ ಚಕ್ರವ್ಯೂಹದಲ್ಲಿ ಸಾಧಿಸುವ ಛಲ ಊಹಿಸಲು ಅಸಾಧ್ಯ. ಕುಂದಾಪುರದಲ್ಲಿ ಸ್ವತಃ ತಾನೇ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಿಲ್ಲ ಎಂದರಿತ ಕೊಡ್ಗಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ತನ್ನ ಶಿಷ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಕುಂದಾಪುರದ ರಾಜಕಾರಣದ ರಂಗಕ್ಕೆ ಕರೆತಂದು ಅವರನ್ನು ಶಾಸಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇವಿಷ್ಟಲ್ಲದೆ ಜಿಲ್ಲೆಯಲ್ಲಿ ಇನ್ನೂ ಹಲವು ರಾಜಕೀಯ ತಂತ್ರಗಳನ್ನು ಹೆಣೆದು ಅದರಲ್ಲಿಯೂ ಗೆಲುವಿನ ನಗೆ ಬೀರಿದ್ದರು.

ಇಂದು ಕೊಡ್ಗಿ ಅಸ್ತಂಗತರಾಗುತ್ತಲೇ ಪರಿಶುದ್ಧ ರಾಜಕಾರಣದ ಆದರ್ಶ ದೀಪವೊಂದು ಆರಿಹೋದ ಅನುಭವ ಆಗುತ್ತಿದೆ. ಮಚ್ಚಟ್ಟಿನ ಸ್ವಾತಂತ್ರ್ಯ ಯೋಧನ ಮನೆಯಿಂದ ಎದ್ದು ಬಂದ ಜನಪರ ಹೋರಾಟಗಾರನೊಬ್ಬ ಸಮಾಜದ ಓರೆ ಕೋರೆಗಳನ್ನು ತಿದ್ದಿ, ತನ್ನ ಬಂಡಾಯದ ಭಾವನೆಗಳಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಡನೆ ನಾಗರಿಕ ಸಮಾಜವನ್ನು ಸೃಷ್ಟಿ ಮಾಡಲು ದುಡಿದ ಬಗೆ, ಪಟ್ಟ ಶ್ರಮ, ಎಲ್ಲವೂ ಕೊಡ್ಗಿಯವರ ಹೆಜ್ಜೆ ಗುರುತಿನೊಂದಿಗೆ ನೆನಪಾಗಿ ಉಳಿಯಲಿ. ಕೊಡ್ಗಿ ಮತ್ತೊಮ್ಮೆ ಹುಟ್ಟಿ ಬರಲಿ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next