Advertisement
ಹಿಂದೂ ಕ್ಯಾಲೆಂಡರ್ ನಲ್ಲಿ 12 ಮಾಸಗಳಿವೆ. ಪ್ರತಿ ಮಾಸದಲ್ಲೂ ಹುಣ್ಣಿಮೆ, ಅಮಾವಾಸ್ಯೆ 15 ದಿನಗಳಿಗೊಮ್ಮೆ ಬರುತ್ತದೆ. ಸೂರ್ಯ, ಚಂದ್ರ ಶೂನ್ಯ ಡಿಗ್ರಿಯಲ್ಲಿದ್ದಾಗ ಅಮಾವಾಸ್ಯೆ, ನಂತರ ಪ್ರತಿ 12 ಡಿಗ್ರಿ ದೂರವಾದಾಗ ಒಂದೊಂದು ತಿಥಿಗಳು ಬರುತ್ತಾ ಹೋಗುತ್ತದೆ. ಅಮಾವಾಸ್ಯೆ ನಂತರ ಶುಕ್ಲ ಪಕ್ಷವೂ, ಹುಣ್ಣಿಮೆ ನಂತರ ಕೃಷ್ಣ ಪಕ್ಷವು ಬರುತ್ತದೆ. ಕೃಷ್ಣ ಪಕ್ಷದ ಚತುರ್ದಶಿ ನಂತರ ಬರುವ ತಿಥಿ ಅಮಾವಾಸ್ಯೆ ಆಗಿರುತ್ತದೆ. ಹಿಂದೂ ಕ್ಯಾಲೆಂಡರ್ ನ 4ನೇ ಮಾಸ ಆಷಾಡದ ಕೊನೆಯ ದಿನವೇ ಭೀಮನ ಅಮಾವಾಸ್ಯೆ. ಈ ವರ್ಷ ಆಗಸ್ಟ್ ತಿಂಗಳ 8ನೇ ತಾರೀಕು ಭೀಮನ ಅಮಾವಾಸ್ಯೆ ಬಂದಿದೆ.
Related Articles
Advertisement
ಇದಕ್ಕೊಂದು ಪುರಾಣ ಕಥೆಯೂ ಇದೆ. ಹಿಂದೆ ಒಬ್ಬ ಬ್ರಾಹ್ಮಣ ದಂಪತಿ ಕಾಶಿ ಯಾತ್ರೆ ಕೈಗೊಳ್ಳುವಾಗ, ತಮ್ಮ ಅವಿವಾಹಿತ ಮಗಳ ಜವಾಬ್ದಾರಿಯನ್ನು ಮಗ ಮತ್ತು ಸೊಸೆಗೆ ಒಪ್ಪಿಸಿ ಹೊರಟಿದ್ದರು. ಆ ಸಮಯದಲ್ಲಿ ಆ ರಾಜ್ಯದ ರಾಜಕುಮಾರ ಸಾವನ್ನಪ್ಪುತ್ತಾನೆ. ಅವಿವಾಹಿತನಾದ ರಾಜಕುಮಾರನ ಶವವನ್ನು ವಿವಾಹವಾಗುವವರಿಗೆ ಅಪಾರ ಧನ, ಸಂಪತ್ತು ನೀಡುವುದಾಗಿ ರಾಜ್ಯದಲ್ಲಿ ಡಂಗುರ ಸಾರಲಾಗುತ್ತದೆ.
ಆಗ ಹಣದ ಆಸೆಗೆ ಬ್ರಾಹ್ಮಣ ದಂಪತಿಯ ಮಗ, ತನ್ನ ತಂಗಿಯನ್ನು ಶವದ ಜತೆ ವಿವಾಹ ಮಾಡಿಸಲು ಒಪ್ಪಿಗೆ ಸೂಚಿಸುತ್ತಾನೆ. ಕೊನೆಗೂ ಮುಗ್ದ ಹುಡುಗಿಯ ವಿವಾಹ ರಾಜಕುಮಾರನ ಶವದ ಜತೆ ನೆರವೇರಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಂತರ ರಾಜಕುಮಾರನ ಶವವನ್ನು ಅಂತ್ಯಸಂಸ್ಕಾರ ಮಾಡಲು ಗಂಗಾತೀರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅಂತ್ಯಕ್ರಿಯೆ ನಡೆಸುವ ವೇಳೆ ಭಾರೀ ಮಳೆ ಬಂದಾಗ ಎಲ್ಲರೂ ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ ಆ ಮದುಮಗಳು ಅಲ್ಲಿಂದ ಕದಲದೇ, ಅಲ್ಲಿಯೇ ಇದ್ದ ಮಣ್ಣಿಂದ ದೀಪ ಮಾಡಿ ಬೆಳಗಿಸಿ ವೃತ ಆಚರಿಸುತ್ತಾಳೆ. ತನ್ನ ತಾಯಿ ಆಚರಿಸುತ್ತಿದ್ದ ಭೀಮನ ಅಮಾವಾಸ್ಯೆಯ ಮಹತ್ವವನ್ನು ತಿಳಿದ ಆ ಹೆಣ್ಣು ವ್ರತ ಆಚರಿಸುತ್ತಿದ್ದ ಸಂದರ್ಭ ಅಲ್ಲಿಗೆ ಒಂದು ಜೋಡಿ ದಂಪತಿ ಬಂದು ವಿಚಾರಿಸುತ್ತಾರೆ.
ಆಗ ಆಕೆ ಹೇಳುತ್ತಾಳೆ, ತನ್ನ ಗಂಡನ ಆಯುಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಈ ವ್ರತ ಆಚರಿಸುತ್ತಿದ್ದೇನೆ ಎನ್ನುತ್ತಾಳೆ. ಆಗ ಅಲ್ಲಿಗೆ ಬಂದ ದಂಪತಿ ಬೇರೆ ಯಾರೂ ಅಲ್ಲ ಸಾಕ್ಷಾತ್ ಶಿವ-ಪಾರ್ವತಿಯಾಗಿದ್ದರು. ಅವಳ ವ್ರತ, ಶ್ರದ್ಧೆಗೆ ಮೆಚ್ಚಿದ ಶಿವ, ಪಾರ್ವತಿ ವರ ಕೇಳುವಂತೆ ಹೇಳುತ್ತಾರೆ, ಆಗ ಆಕೆ ತನ್ನ ಗಂಡನನ್ನು ಬದುಕಿಸುವಂತೆ ಬೇಡಿಕೊಳ್ಳುತ್ತಾಳೆ. ಅದರಂತೆ ಮೃತ ಯುವರಾಜನಿಗೆ ಜೀವ ಬಂದು, ಅರಮನೆಗೆ ಹೋಗುತ್ತಾನೆ. ಹೀಗೆ ಪತ್ನಿಯ ವ್ರತಾಚರಣೆಯಿಂದ ಜೀವಂತವಾದ ರಾಜಕುಮಾರ ನೂರು ವರ್ಷ ಸುಖ, ಸಮೃದ್ಧಿಯಿಂದ ಜೀವನ ಸಾಗಿಸಿದ್ದ ಎಂಬುದು ಕಥೆ.
ಇದರ ಮಹತ್ವ ಅರಿತು, ಇಂದಿಗೂ ಭೀಮನ ಅಮಾವಾಸ್ಯೆಯಂದು ಮಹಿಳೆಯರು ಗಂಡನ ಆಯುಷ್ಯ ಮತ್ತು ಶ್ರೇಯಸ್ಸಿಗಾಗಿ ವ್ರತ ಆಚರಿಸುವ ಪದ್ಧತಿ ರೂಢಿಗೆ ಬಂದಿದೆ.
*ರವೀಂದ್ರ ಐರೋಡಿ, ಸಾಸ್ತಾನ