“ಭೀಮ’ ಗೆದ್ದಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಅದರಲ್ಲೂ ಇನ್ನೂ ಚಿಕ್ಕ ವಯಸ್ಸಿನ ಚಿಗುರು ಮೀಸೆಯ ನಿರ್ಮಾಪಕ ಕೃಷ್ಣ ಸಾರ್ಥಕ್ ಸ್ವಲ್ಪ ಹೆಚ್ಚೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ತುಂಬಾ ವರ್ಷಗಳ ನಿರ್ಮಾಣದ ಶ್ರಮಕ್ಕೆ ಸಿಕ್ಕ ಫಲ.
“ದಯವಿಟ್ಟು ಗಮನಿಸಿ’ ಎಂಬ ಸಿನಿಮಾ ಮೂಲಕ ನಿರ್ಮಾಪಕರಾದವರು ಕೃಷ್ಣ ಸಾರ್ಥಕ್. ಮಾಡಿದ ಸಿನಿಮಾಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಕೈ ಹಿಡಿಯದಿದ್ದರೂ, ಕಾಸು ಕಳೆದು ಕೊಳ್ಳುತ್ತಿರಲಿಲ್ಲ. ಹಾಗೆಯೇ ಯಾರಿಗೂ ಬಿಡಿಗಾಸನ್ನು ಬಾಕಿ ಇಟ್ಟುಕೊಳ್ಳದೇ ಲೆಕ್ಕ ಚುಕ್ತಾ ಮಾಡಿಬಿಡುತ್ತಿದ್ದರು ಕೃಷ್ಣ ಸಾರ್ಥಕ್. ಇಂತಿಪ್ಪ ಕೃಷ್ಣ ಸಾರ್ಥಕ್‌ಗೆ ಸ್ಟಾರ್ ಸಿನಿಮಾ ಮಾಡುವ ಬಯಕೆ. ಆಗ ಮೊದಲು ಕಣ್ಣೆದುರಿಗೆ ಬಂದದ್ದೇ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್. ಅದರ ಹಿಂದೆ ಕಾರಣವೂ ಇದೆ.
ಕೃಷ್ಣ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಬಯಕೆ. ಕುಟುಂಬದವರೊಂದಿಗೆ ಸಾಕಷ್ಟು ಸಿನಿಮಾಗಳನ್ನು ನೋಡಿರುವ ಕೃಷ್ಣ, ಮೊದಲು ನೋಡಿದ್ದು ಶಿವಣ್ಣ ನಟಿಸಿದ್ದ 50ನೇ ಸಿನಿಮಾ “ಎ.ಕೆ 47′. “ನಾನೇನಾದ್ರೂ ಪ್ರೊಡ್ನೂಸರ್ ಆದ್ರೆ ಶಿವಣ್ಣನ ಸಿನಿಮಾ ಮಾಡ್ಬೇಕು’ ಎಂದು ಸುಮಾರು ವರ್ಷಗಳ ಹಿಂದೆಯೇ ತೀರ್ಮಾನಕ್ಕೆ ಬಂದುಬಿಡುತ್ತಾರೆ. “ದೇವರ ದಯೆಯೋ, ನನ್ನ ಕುಟುಂಬದವರ ಆಶೀರ್ವಾದವೋ ಇಂಡಸ್ಟ್ರಿಗೆ ಬಂದ ಮೂರ್ನಾಲ್ಕು ವರ್ಷದಲ್ಲೇ ಶಿವಣ್ಣ ಸಿನಿಮಾ ಪ್ರೊಡ್ಯೂಸ್ ಮಾಡುವ ಸುಯೋಗ ಒದಗಿ ಬಂತು’ ಎನ್ನುವ ಕೃಷ್ಣ ಸಾರ್ಥಕ್, ತಡಮಾಡದೇ “ಬೈರಾಗಿ’ಗೆ ಮುಹೂರ್ತ ಮಾಡುತ್ತಾರೆ.
ದೊಡ್ಡ ಮಟ್ಟದಲ್ಲಿಯೇ “ಬೈರಾಗಿ’ಯನ್ನು ನಿರ್ಮಿಸಿದ್ದ ಕೃಷ್ಣ ಸಾರ್ಥಕ್, ಮುಂದೆ ಮತ್ತಷ್ಟು ಸಿನಿಮಾ ಮಾಡುವ ಹುಮ್ಮಸ್ಸು ಚಿಗುರೊಡೆಯಿತು. ಆಗಷ್ಟೇ “ಸಲಗ’ ಮೂಲಕ ಗೆಲುವಿನ ಪತಾಕೆ ಹಾರಿಸಿದ್ದ ವಿಜಯ್ ಕುಮಾರ್, ಹೊಸ ಸಿನಿಮಾ ಮಾಡುವ ತಯಾರಿಯಲ್ಲಿದ್ದರು. ಅದರ ನಿರ್ಮಾತೃವಾಗಿ ಕೈ ಜೋಡಿಸಿದ್ದು ಕೃಷ್ಣ ಸಾರ್ಥಕ್. ಇವರೊಟ್ಟಿಗೆ ಜಗದೀಶ್ ಗೌಡ ಸಹ ಸಾಥ್ ನೀಡಿದರು. ಇಂದು ಇಡೀ ಚಿತ್ರತಂಡ “ಭೀಮ’ನ ಗೆಲುವನ್ನು ಸಂಭ್ರಮಿಸುತ್ತಿದೆ. ಗೆಲುವಿನ ಮಳೆಯಿಲ್ಲದೇ ಕಂಗಾಲಾಗಿದ್ದ ಚಂದನವನಕ್ಕೆ ಮಹಾ ಮಳೆಯಾಗಿದೆ.
ಹೊಸ ಪ್ರತಿಭೆಗಳಿಗೆ, ಮತ್ತಷ್ಟು ಸಿನಿಮಾ ತಂಡಗಳಿಗೆ “ಭೀಮ’ ಬಲ ತುಂಬಿದಂತೆ ಚೈತನ್ಯದಿಂದ ಓಡಾಡುವಂತಾಗಿದೆ. ಇದರ ಹಿಂದಿರುವ ಮಾಸ್ಟರ್ ಮೈಂಡ್, ಸದಾ ಲವಲವಿಕೆಯಿಂದ ಕೂಡಿರುವ ಕೃಷ್ಣ ಸಾರ್ಥಕ್ ಕೆಲಸ ಮಾತನಾಡುತ್ತಿದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಒಂದು ಕೋಟಿಯಿಂದ ನಿರ್ಮಾಣ ಶುರುವಾದ ಸಿನಿಮಾದ ಕಾರ್ಯಗಳು ಇಂದು 25 ಕೋಟಿಯವರೆಗೂ ಬಂದು ತಲುಪಿದೆ. ಇವೆಲ್ಲದರ ಫಲವಾಗಿ ಇಂದು ಕೃಷ್ಣ ಸಾರ್ಥಕ ಭಾವದಲ್ಲಿದ್ದಾರೆ.