ಭಟ್ಕಳ : ಹೆಚ್ಚಿನ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾದ ನಂತರ ಅನುದಾನವೇ ಬರದೇ, ಅಭಿವೃದ್ಧಿಯನ್ನೂ ಮಾಡಲಾಗದೇ ರಾಜ್ಯ ಹಾಗೂ ಕೇಂದ್ರ ಸರಕಾರದ ಮೇಲೆ ತೀವ್ರ ಅಸಮಾಧಾನ ಹೊಂದಿದ್ದಾರೆ, ಇದು ಕಾಂಗ್ರೆಸ್ ಪಕ್ಷಕ್ಕೆ, ತನ್ನ ಗೆಲುವಿಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಅವರು ಇಲ್ಲಿನ ಖಾಸಗೀ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದೆ. ರಾಜೀವ ಗಾಂಧಿ ಪ್ರಧಾನಮಂತ್ರಿ ಇದ್ದ ಸಂದರ್ಭದಲ್ಲಿ ಪಂಚಾಯತ್‍ರಾಜ್ ವ್ಯವಸ್ಥೆ ಬಲಪಡಿಸುವ ಕನಸಿನೊಂದಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿದ್ದರು. ಆದರೆ ಬಿಜೆಪಿ ಸರಕಾರ ಪಂಚಾಯತ್‍ರಾಜ್ ವ್ಯವಸ್ಥೆ ಕುರಿತ ನಂಬಿಕೆ ಇಲ್ಲದಂತೆ ಮಾಡಿದ್ದು ಸದಸ್ಯರನ್ನು ಜನರು ಸಂಶಯದಿಂದ ನೋಡುವಂತಾಗಿದೆ. ಅನುದಾನ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕಿರುವುದು ಸದಸ್ಯರಾಗಿ ಆಯ್ಕೆಯಾದವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದರು.
ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಸರಿಯಾದ ಅನುದಾನ ಇಲ್ಲದೇ ಅಭಿವೃದ್ಧಿ ಮಾಡಲಾಗದೇ ಜನರಿಂದ ಮಾತುಕೇಳುವ ಪರಿಸ್ಥಿತಿ ಬಂದಿದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಹೆಚ್ಚಿನ ಮನೆಗಳನ್ನು ಮಂಜೂರಿ ಮಾಡಿದ್ದರು. ಈಗಿನ ಸರಕಾರ ಅಂತಹ ಮನೆಗಳ ಬಿಲ್ ಪಾವತಿಯನ್ನೂ ಸಹ ಮಾಡಿಲ್ಲ. ಸರಕಾರದ ಬಿಲ್ ನಂಬಿ ಮನೆ ಕಟ್ಟಿಕೊಂಡವರು ಸಾಲ ಮಾಡಿ ಮನೆ ಪೂರ್ಣಗೊಳಿಸುವಂತಾಗಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಸರಕಾರದ ದುರಾಡಳಿತ ನೋಡಿ ಜನರು ರೋಸಿ ಹೋಗಿದ್ದಾರೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಿದರೆ ತಮಗೆ ಸೋಲು ಖಚಿತ ಎಂದು ತಿಳಿದ ರಾಜ್ಯದ ಬಿಜೆಪಿ ಸರಕಾರ ಕ್ಷೇತ್ರ ವಿಂಗಡನೆ ನೆಪದಲ್ಲಿ ತಾ.ಪಂ., ಜಿ.ಪಂ. ಚುನಾವಣೆಯನ್ನು ಮುಂದೂಡಿದೆ ಎಂದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸ್ಥಾನದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದು ಈ ಬಾರಿಯೂ ನಮಗೇ ಗೆಲುವು ನಿಶ್ಚಿತ. ಗ್ರಾ.ಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಸದಸ್ಯರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಲಿದ್ದಾರೆ ಎನ್ನುವ ನಂಬಿಕೆ ಇದೆ. ಈಗಾಗಲೇ ಜಿಲ್ಲಾದ್ಯಂತ ಪ್ರಚಾರ ಕಾರ್ಯ ಆರಂಭಿಸಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಮುಖಂಡರೂ ಒಗ್ಗಟ್ಟಾಗಿ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ. ಡಿ. ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಪ್ರಮುಖರಾದ ರಾಮಾ ಮೊಗೇರ, ವನಿತಾ ನಾಯ್ಕ, ಪಕ್ಷದ ಉಸ್ತುವಾರಿ ಸುಬ್ರಹ್ಮಣ್ಯ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಮಜಿ, ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಷ್ಣು ದೇವಡಿಗ ಮುಂತಾದವರಿದ್ದರು.