ಮಹಾನಗರ : ನಗರದ ಭವಂತಿಸ್ಟ್ರೀಟ್‌ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಳೆ ಕಟ್ಟಡವನ್ನು ಮಹಾನಗರ ಪಾಲಿಕೆ ಗುರುವಾರ ತೆರವುಗೊಳಿಸಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಗರದ ಭವಂತಿ ಸ್ಟ್ರೀಟ್ ಬಳಿಯ ಜಾನಕಿ ಕಟ್ಟಡದ ಎದುರಿನ ಭಾಗ ಕುಸಿದು ಬಿದ್ದಿತ್ತು. ಮತ್ತೆ ಸುರಿದ ಮಳೆಯಿಂದ ನೀರು ಹೀರಿ ಕಟ್ಟಡ ಕುಸಿಯುವ ಹಂತದಲ್ಲಿತ್ತು. ಇದು ಅಪಾಯಕಾರಿ ಸ್ಥಿತಿಯಲ್ಲಿದೆ ಇದೆ ಎಂದು ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಿದ್ದರು. ಇದೀಗ ಪಾಲಿಕೆ ಹಳೆ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಮಾಡಿದೆ. ಇದರೊಂದಿಗೆ ಅದೇ ರಸ್ತೆಯಲಿದ್ದ ಸುರೇಂದ್ರ ಹೆಗ್ಗಡೆ ಎನ್ನುವವರಿಗೆ ಸೇರಿದ ಕಟ್ಟಡವನ್ನು ಮಾಲಕರೇ ಪಾಲಿಕೆ ನೆರವಿನೊಂದಿಗೆ ತೆರವು ಮಾಡಿದ್ದಾರೆ.
ಸುದಿನ ಈ ಹಿಂದೆ ವರದಿ ಮಾಡಿತ್ತು
ಉದಯವಾಣಿ ಸುದಿನ ಈ ಹಿಂದೆ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯಾಡಳಿತ ಎಂಬ ಶೀರ್ಷಿಕೆಯಲ್ಲಿ ಜೂ. 10ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಈ ವೇಳೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿ ನಗರದಲ್ಲಿ ಶಿಥಿಲಾವಸ್ಥೆಯ ಅನೇಕ ಕಟ್ಟಡಗಳಿವೆ. ಅದರ ಜತೆಗೆ ಅಪಾಯಕ್ಕೆ ಎಡೆಮಾಡುವ ಅನೇಕ ಮರಗಳಿದ್ದು, ಇವುಗಳನ್ನು ಗುರುತಿಸಿ ತೆರವು ಮಾಡಲು ಪಾಲಿಕೆಗೆ ತಿಳಿಸಲಾಗಿದೆ ಎಂದು ಹೇಳಿದ್ದರು. ಅದೇ ರೀತಿ ಪಾಲಿಕೆ ಇದೀಗ ಕಟ್ಟಡ ತೆರವುಗೊಳಿಸಲು ಮುಂದಾಗಿದೆ.