Advertisement

ವಿಧಾನ ಪರಿಷತ್‌ ಚುನಾವಣೆಯತ್ತ ಭವಾನಿ ರೇವಣ್ಣ?

11:59 PM Nov 06, 2021 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದ “ದೊಡ್ಮನೆ’ ಎಂದೇ ಖ್ಯಾತಿಯ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದಿಂದ ಮತ್ತೊಬ್ಬರ ವಿಧಾನಸೌಧ ಪ್ರವೇಶಕ್ಕೆ ಸದ್ದಿಲ್ಲದೆ ವೇದಿಕೆ ಸಜ್ಜಾಗುತ್ತಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರ ಎಚ್‌.ಡಿ. ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

Advertisement

2022ರ ಜ. 5ಕ್ಕೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನಪರಿಷತ್‌ನ 25 ಸ್ಥಾನಗಳು ತೆರವಾಗಲಿದೆ. ಡಿಸೆಂಬರ್‌ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ.

ಕಳೆದ ಚುನಾವಣೆ ಸಂದರ್ಭದಲ್ಲೇ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಒತ್ತಡ ಇತ್ತಾದರೂ ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈ ಬಾರಿ ಭವಾನಿ ರೇವಣ್ಣ ಅವರೇ ಸ್ಪರ್ಧೆ ಮಾಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಳೆದ ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಹಿರಿಯರಾಗಿದ್ದ ಪಟೇಲ್‌ ಶಿವರಾಂ ಸ್ಪರ್ಧಿಸಿ ಸೋತಿದ್ದರು. ಜೆಡಿಎಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಗೆ ಹೋಗಿತ್ತು. ಇಲ್ಲಿ ಮತ್ತೆ ಜೆಡಿಎಸ್‌ ಗೆಲ್ಲಬೇಕಿದ್ದರೆ ಭವಾನಿಯವರೇ ಕಣಕ್ಕಿಳಿಯಬೇಕು ಎಂದು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲೂ ಪ್ರಸ್ತಾವವಾಯಿತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಇಂಗ್ಲೆಂಡ್‌ ವಿರುದ್ಧ ಗೆದ್ದರೂ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ರೇಸ್‌ನಿಂದ ಹೊರಕ್ಕೆ

Advertisement

10 ವರ್ಷದಿಂದ ಸ್ಪರ್ಧೆ ಮಾತು
ಕುಮಾರಸ್ವಾಮಿಯವರ ಪತ್ನಿ ಅನಿತಾ ಅವರು ಮಧುಗಿರಿ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಭವಾನಿ ರಾಜ್ಯ ರಾಜಕಾರಣ ಪ್ರವೇಶಿಸುವ ಮಾತು ಹತ್ತು ವರ್ಷಗಳಿಂದ ಕೇಳಿಬರುತ್ತಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈಸೂರು ಅಥವಾ ಹಾಸನ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನಲಾಗಿತ್ತು.

ಬಿಜೆಪಿ ಜತೆ ಮೈತ್ರಿ?
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್‌, ಕೋಲಾರ-ಚಿಕ್ಕಬಳ್ಳಾಪುರ, ಮೈಸೂರು- ಚಾಮರಾಜನಗರ, ತುಮಕೂರು, ಚಿತ್ರದುರ್ಗ- ದಾವಣಗೆರೆ, ಬೆಂಗಳೂರು ಗ್ರಾಮಾಂತರ -ಕನಕಪುರ ಸೇರಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಒಪ್ಪಂದ ಅಥವಾ ಮೈತ್ರಿ ಮಾಡಿಕೊಂಡು “ಕಾಮನ್‌ ಕ್ಯಾಂಡಿಡೇಟ್‌’ ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಹೆಚ್ಚು ಸ್ಥಾನ ಗೆಲ್ಲಲು ಹೊರಟಿರುವ ಕಾಂಗ್ರೆಸ್ಸಿಗೆ “ಟಕ್ಕರ್‌’ ನೀಡಲು ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

ಆದರೆ, ಸಿ.ಆರ್‌. ಮನೋಹರ್‌ ಬಿಜೆಪಿ ಸೇರಿ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಹಾಗೂ ಸಂದೇಶ್‌ ನಾಗರಾಜ್‌ ಬಿಜೆಪಿಯಿಂದ ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಜೆಡಿಎಸ್‌ ಬೆಂಬಲ ನೀಡುವುದೇ ಎಂಬ ಪ್ರಶ್ನೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next