ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ನೀಡಿರುವ ಮಧ್ಯಾಂತರ ನಿರೀಕ್ಷಣ ಜಾಮೀನು ಸಂಬಂಧ ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾದಿರಿಸಿತು. ಅದರಂತೆಆದೇಶ ಹೊರಬೀಳುವವರೆಗೆ ಭವಾನಿಗೆ ನೀಡಲಾಗಿದ್ದ ಮಧ್ಯಾಂತರ ನಿರೀಕ್ಷಣ ಜಾಮೀನು ಮುಂದುವರಿಯಲಿದೆ.
ಜಾಮೀನು ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ವಿಶೇಷ ಎಸ್‌ಪಿಪಿ ಪ್ರೊ| ರವಿವರ್ಮ ಕುಮಾರ್, ಭವಾನಿ ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಆ ಮೂಲಕ ತನಿಖೆಗೆ ಸಹಕರಿಸಬೇಕೆಂಬ ನಿರೀಕ್ಷಣ ಜಾಮೀನಿನ ಷರತ್ತುಗಳನ್ನು ಉಲ್ಲಂ ಸಿದ್ದಾರೆ. ಮೊಬೈಲ್ ವಶಪಡಿಸಿಕೊಳ್ಳಬೇಕಾಗಿದೆ, ಸ್ಥಳ ಮಹಜರು ನಡೆಸಬೇಕಾಗಿದೆ ಹಾಗಾಗಿ ಅವರನ್ನು ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕಾಗಿದೆ. ಆದ್ದರಿಂದ ಅವರಿಗೆ ನಿರೀಕ್ಷಣ ಜಾಮೀನನ್ನು ಮುಂದುವರಿಸಬಾರದು ಎಂದು ಬಲವಾಗಿ ವಾದಿಸಿದರು.
ಅರ್ಜಿದಾರರಿಗೆ ನ್ಯಾಯಾಲಯ ಕಳೆದ ವಾರ ಮಂಜೂರು ಮಾಡಿರುವ ನಿರೀಕ್ಷಣ ಜಾಮೀನನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು. ನ್ಯಾಯಾಲಯದ ನಿರ್ದೇಶನದಂತೆ ಭವಾನಿ ತನಿಖೆಗೆ ಸಹಕಾರ ನೀಡುತ್ತಿಲ್ಲ, ಅಸಹಕಾರ ತೋರುತ್ತಿರುವುದರಿಂದ ತನಿಖೆ ಮುಂದುವರಿಸಲಾಗುತ್ತಿಲ್ಲ. ಮೂರು ದಿನ ತನಿಖೆಗೆ ಹಾಜರಾದರೂ ಎಲ್ಲ ಪ್ರಶ್ನೆಗಳಿಗೂ ನೋ ಎಂಬ ಉತ್ತರ ನೀಡಿದ್ದಾರೆ. ಫೋನ್ ಕೋಡುತ್ತಿಲ್ಲ. ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಆಗ ನ್ಯಾಯಪೀಠ, ಪ್ರಾಸಿಕ್ಯೂಷನ್ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಬಿಡು ವುದು ಆರೋಪಿಗೆ ಬಿಟ್ಟ ವಿಚಾರ. ಜತೆಗೆ ಪ್ರಾಸಿಕ್ಯೂಷನ್ ಹೀಗೇ ಉತ್ತರ ನೀಡಬೇಕೆಂದು ಬಯಸುವುದು ಸರಿಯಲ್ಲ ಎಂದಿತು.3 ದಿನಗಳ ವಿಚಾರಣೆ ವೇಳೆ ಭವಾನಿ ಅವರನ್ನು ಕೇಳಿದ ಪ್ರಶ್ನಾವಳಿಗಳ ಹಾಗೂ ಉತ್ತರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಆದರೆ ನಿಮಗೆ ಬೇಕಾದ ಉತ್ತರವನ್ನು ಅವರು ಕೊಡಲು ಸಾಧ್ಯವಿಲ್ಲ. ಅವರು ತಮಗೆ ತಿಳಿದಿದ್ದನ್ನು ಹೇಳಿದ್ದಾರೆ. ಅದು ಅಸಹ ಕಾರ ಎಂದು ಹೇಳುವುದು ಹೇಗೆ ಎಂದು ಪ್ರಶ್ನಿಸಿತು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ತೀರ್ಪು ಕಾದಿರಿಸಿ, ಅಲ್ಲಿವರೆಗೆ ನಿರೀಕ್ಷಣ ಜಾಮೀನು ಮುಂದುವರಿಯಲಿದೆ ಎಂದು ಹೇಳಿತು. ಅಲ್ಲದೆ, ಮೈಸೂರಿನ ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಮಾರ್ಪಡಿಸಿದ ನ್ಯಾಯಪೀಠ, ಮೈಸೂರು ಜಿಲ್ಲೆ ಹಾಗೂ ಹಾಸನ ಜಿಲ್ಲೆಗೆ ಭವಾನಿ ರೇವಣ್ಣ ಹೋಗುವಂತಿಲ್ಲ. ಆದರೆ ತನಿಖಾ ದೃಷ್ಟಿಯಿಂದ ತನಿಖಾಧಿಕಾರಿಗಳು ಕೆರೆದುಕೊಂಡ ಹೋಗಬೇಕಾದರೆ ಈ ಷರತ್ತು ಅನ್ವಯ ಆಗಲ್ಲ ಎಂದು ನ್ಯಾಯಪೀಠ ಹೇಳಿತು.