ನಟಿ ಭವಾನಿ ಪ್ರಕಾಶ್ ನಿರ್ದೇಶಕಿಯಾಗುತ್ತಿದ್ದಾರೆ. ಹೌದು, ಭವಾನಿ ಪ್ರಕಾಶ್ ಅಪ್ಪಟ ರಂಗಭೂಮಿ ಕಲಾವಿದೆ, ಕಿರುತೆರೆ ಹಾಗು ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿರುವ ಭವಾನಿ ಪ್ರಕಾಶ್, ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರಕ್ಕೆ “ರಂಗಪ್ ಮೇಷ್ಟ್ರು ಕುದುರೆ ಕಥೆ’ ಎಂದು ನಾಮಕರಣ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸ್ಫೂರ್ತಿ, ಬರಹಗಾರ ಖಲೀಮ್‌ವುಲ್ಲ ಅವರು ಪತ್ರಿಕೆಯಲ್ಲಿ ಬರೆಯುತ್ತಿದ್ದ “ಕ್ಲಾಸ್ ಟೀಚರ್’ ಎಂಬ ಅಂಕಣ.
ಆ “ಕ್ಲಾಸ್ ಟೀಚರ್’ ಕಥೆಯೇ, “ರಂಗಪ್ ಮೇಷ್ಟ್ರು ಕುದುರೆ ಕಥೆ’ ಹೆಸರಲ್ಲಿ ಚಿತ್ರವಾಗುತ್ತಿದೆ. ಸದ್ಯಕ್ಕೆ ಚಿತ್ರದ ನಟ,ನಟಿಯರಾಗಲಿ, ತಂತ್ರಜ್ಞರಾಗಲಿ ಆಯ್ಕೆಯಾಗಿಲ್ಲ. ಆದರೆ, ಚಿತ್ರಕ್ಕೆ ಖಲೀಮ್‌ವುಲ್ಲ ಅವರದೇ ಚಿತ್ರಕಥೆ, ಸಂಭಾಷಣೆ ಇರಲಿದೆ. ಆ ಕುರಿತಂತೆ ಈಗಾಗಲೇ ಸ್ಕ್ರಿಪ್ಟ್ ಕೆಲಸ ಕೂಡ ನಡೆದಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣಕ್ಕೆ ತಂಡ ಕಟ್ಟಿಕೊಂಡು ಹೋಗುವ ಯೋಚನೆ ಮಾಡಿದ್ದಾರೆ ನಿರ್ದೇಶಕಿ ಭವಾನಿ ಪ್ರಕಾಶ್.
ಒಂದಷ್ಟು ಹೊಸಬರ ಜತೆ ಸೇರಿ ಕೆಲಸ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುವ ಭವಾನಿ ಪ್ರಕಾಶ್, ನುರಿತ ಹಿರಿಯ ಕಲಾವಿದರು ಹಾಗೂ ಬಹುತೇಕ ರಂಗಭೂಮಿ ಪ್ರತಿಭೆಗಳ ಜತೆ ಕೆಲಸ ಮಾಡುವುದಾಗಿ ಹೇಳುತ್ತಾರೆ. ಮಂಡ್ಯ ಹಾಗೂ ಸಕಲೇಶಪುರ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಚನೆ ಅವರಿಗಿದೆ. ಈ ಸಿನಿಮಾ ಕಥೆ ಎರಡು ಸೀಸನ್‌ಗಳನ್ನು ಬಯಸುವುದರಿಂದ ಬೇಸಿಗೆ ಕಾಲ ಹಾಗೂ ಮಳೆಗಾಲಗಳಲ್ಲಿ ಚಿತ್ರೀಕರಿಸುವ ಆಲೋಚನೆ ಅವರಿಗಿದೆ.
ಇನ್ನು, ಇಲ್ಲಿ ಅವರು ಕ್ಯಾಮೆರಾ ಮುಂದೆ ನಿಲ್ಲುತ್ತಾರಾ? ಎಂಬ ಪ್ರಶ್ನೆಗೆ, ಸದ್ಯಕ್ಕೆ ಉತ್ತರವಿಲ್ಲ. ಆದರೆ, ಕ್ಯಾಮೆರಾ ಹಿಂದೆ ನಿಂತು ಮಾಡುವ ಕೆಲಸದ ಜವಾಬ್ದಾರಿಯೇ ದೊಡ್ಡದಾಗಿರುವುದರಿಂದ ಅದನ್ನು ನಿರ್ವಹಿಸುವ ಸಲುವಾಗಿ ಅವರು ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಅಂದಹಾಗೆ, ಇದು ಭವಾನಿ ಪ್ರಕಾಶ್ ಅವರ ಬಯಲು ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಎರಡನೇ ಚಿತ್ರ. ಈ ಹಿಂದೆ “ಅತ್ತಿ ಹಣ್ಣು ಮತ್ತು ಕಣಜ’ ಎಂಬ ಚಿತ್ರ ತಯಾರಾಗಿತ್ತು.