Advertisement

ಭಾವನ ಮನೆಗೆ ಕನ್ನ ಹಾಕಿದ್ದ ಮೈದುನ

11:35 AM Mar 19, 2017 | Team Udayavani |

ಬೆಂಗಳೂರು: ಕೆ.ಆರ್‌.ಪುರ ಶಾಸಕ ಭೈರತಿ ಬಸವರಾಜು ಅವರ ನಾದಿನಿ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Advertisement

ಕೋಲಾರದ ಮಾಲೂರು ತಾಲೂಕಿನ ಲಕ್ಕೇನಹಳ್ಳಿಯ ಮಂಜೇಶ್‌(21) ಬಂಧಿತ. ಆರೋಪಿಯಿಂದ 1.60 ಕೋಟಿ ರೂ. ಮೌಲ್ಯದ 5 ಕೆ.ಜಿ ತೂಕದ ವಜ್ರ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾ­ಗಿದೆ.  

ಆರೋಪಿ ಮಂಜೇಶ್‌ ಶ್ರೀಮಂತ­ನಾಗಬೇಕು ಎಂಬ ಆಸೆಯಿಂದ ಕಳವು ಮಾಡಿದ್ದ. ಕದ್ದ ಚಿನ್ನಾಭರಣಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಕಪ್ಪು ಟಿ ಶರ್ಟನಲ್ಲಿ ಸುತ್ತಿ ಆವಲಹಳ್ಳಿ ಠಾಣಾ ವ್ಯಾಪ್ತಿಯ ರಾಂಪುರ ಮುಖ್ಯರಸ್ತೆಯಲ್ಲಿರುವ ನಿರ್ಮಾಣ ಹಂತದ ಎಸ್‌ಎಲ್‌ಎನ್‌ ಲೇಔಟ್‌ನ ಒಳಚರಂಡಿಯಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರ ಸಂಬಂಧಿ: ಶಾಸಕ ಭೈರತಿ ಬಸವರಾಜು ಅವರ ನಾದಿನಿ ಲೀಲಮ್ಮ ಅವರ ಮಕ್ಕಳಾದ ಶ್ರೀನಿವಾಸ್‌ ಮತ್ತು ಗಿರೀಶ್‌ ಎನ್‌ಆರ್‌ಐ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಬಂಧಿತ ಮಂಜೇಶ್‌, ಗಿರೀಶ್‌ ಅವರ ಪತ್ನಿಯ ಸೋದರ ಎಂದು ತಿಳಿದು ಬಂದಿದೆ. ಡಿಪ್ಲೋಮಾ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದ ಮತ್ತು ಸ್ಥಳೀಯವಾಗಿ ರಾಜಕೀಯ ಮಾಡಿಕೊಂಡಿದ್ದ ಮಂಜೇಶ್‌,

ಮಾ.15 ರ ರಾತ್ರಿ ಸುಮಾರು 8 ಗಂಟೆಗೆ ಸುಮಾರಿಗೆ ಎನ್‌ಆರ್‌ಐ ಲೇಔಟ್‌ನಲ್ಲಿರುವ ತನ್ನ ಭಾವ ಗಿರೀಶ್‌ ಅವರ ಮನೆಯಲ್ಲಿ ಬಾಲ್ಕನಿಯ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಶಾಸಕ ಭೈರತಿ ಬಸವರಾಜು ಅವರ ಮಗಳ ಮದುವೆ ಹೋಗಿದ್ದ ಗಿರೀಶ್‌ ಕುಟುಂಬ ತಡರಾತ್ರಿ ಒಂದು ಗಂಟೆ ಸುಮಾರಿಗೆ ವಾಪಸ್‌ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Advertisement

ಮದುವೆ ಮನೆಯಲ್ಲೇ ಇದ್ದ ಆರೋಪಿ: ಬಂಧಿತ ಮಂಜೇಶ್‌ ಮದುವೆ ದಿನ ಗಿರೀಶ್‌ ಕುಟುಂಬದ ಜತೆಯೇ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ. ಅಲ್ಲಿಂದ ಹೊರಬಂದು ಗಿರೀಶ್‌ ಮನೆಗೆ ಹೋಗಿ ಸುಮಾರು 45 ನಿಮಿಷಗಳಲ್ಲಿ ಕಳವು ಮಾಡಿ ಅದನ್ನು ಬೇರೆಡೆ ಬಚ್ಚಿಟ್ಟು, ನಂತರ ಮತ್ತೆ ಮದುವೆ ಮನೆಗೆ ಬಂದು ಯಾರಿಗೂ ಅನುಮಾನ ಬಾರದಂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆಗಾಗಿ ಪೊಲೀಸರು ಮದುವೆ ಮನೆ ಮತ್ತು ಗಿರೀಶ್‌ ಮನೆ ಬಳಿಯ ಮೊಬೈಲ್‌ ನಂಬರ್‌ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮಂಜೇಶ್‌ ನಂಬರ್‌ ಒಂದೆರಡು ಬಾರಿ ಹೊಂದಾಣಿಕೆಯಾಗುತ್ತಿತ್ತು. ಬಳಿಕ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿ­ದ್ದಾನೆ.

ಕೋಟ್ಯಂತರ ರೂ.ಚಿನ್ನಾಭರಣ ಹಾಗೂ ಆಸ್ತಿ ಹೊಂದಿ­ರುವ ಗಿರೀಶ್‌ ಆದಾಯ ತೆರಿಗೆ ಇಲಾಖೆಯ ತನಿಖೆ ಎದುರಿ­ಸಬೇಕಾಗುತ್ತದೆ ಎಂದು ಪೊಲೀಸರ ಮೊರೆ ಹೋಗುವುದಿಲ್ಲ ಎಂದು ಭಾವಿಸಿ ಕೃತ್ಯವೆಸಗಿರುವುದಾಗಿ ಮಂಜೇಶ್‌ ವಿಚಾರಣೆ ಸಂದರ್ಭದಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next