ಭಟ್ಕಳ: ಮನೆಯೊಂದರಲ್ಲಿ ಯಾರೂ ಇಲ್ಲ ಎನ್ನುವುದನ್ನು ತಿಳಿದುಕೊಂಡ ಕಳ್ಳರು ಮನೆಯ ಬಾಗಿಲು ಮುರಿದು ಒಳ ಹೊಕ್ಕು ಸುಮಾರು 25 ಲಕ್ಷ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಹಾಗೂ ಇತರೇ ಸಾಮಾನುಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಕಳೆದ ಜೂ.8 ರಂದು ಚಿತ್ರಾಪುರದ ನಿವಾಸಿ, ಮಾಜಿ ಸೈನಿಕ ಮಹೇಶ ಪಂಡಿತ್ ಮುಂಬೈಗೆ ತೆರಳಿದ್ದರು. ತಮ್ಮ ಸಹೋದರ ಮೃತಪಟ್ಟಿದ್ದರಿಂದ ಅನಿವಾರ್ಯವಾಗಿ ತುರ್ತು ಮನೆಗೆ ಬೀಗ ಹಾಕಿ ಹೋಗಬೇಕಾಗಿ ಬಂದಿದ್ದರಿಂದ ಮುಂಬೈಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆಯ ಮುಂಬಾಗಿಲನ್ನು ಒಡೆದು ಒಳಹೊಕ್ಕು ಮನೆಯಲ್ಲಿರುವ ಕಪಾಟು, ಸೂಟ್‌ಕೇಸ್ ಎಲ್ಲವನ್ನು ಜಾಲಾಡಿ ಮನೆಯಲ್ಲಿದೆ ಎನ್ನಲಾದ ಅಂದಾಜು 25 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಮತ್ತು ಇತರೇ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ 300 ಗ್ರಾಂ ಚಿನ್ನ, 12 ಕೆ.ಜಿ. ಬೆಳ್ಳಿ ಆಭರಣಗಳು ಮನೆಯಲ್ಲಿದ್ದವು ಎನ್ನಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ಮನೆಯ ಮಾಲೀಕರು ಮುಂಬೈಯಿಂದ ಮರಳಿದ ನಂತರವಷ್ಟೇ ತಿಳಿದು ಬರಬೇಕಿದೆ.
ಜೂ. 10 ರ ಶನಿವಾರ ಸಂಜೆ ಪಕ್ಕದ ಮನೆಯವರ ಮನೆ ಬಾಗಿಲು ತೆರೆದುಕೊಂಡಿರುವ ಕುರಿತು ಅನುಮಾನಗೊಂಡು ನೋಡಿದಾಗ ಮನೆಯ ಮಾಲೀಕರು ಬರಲಿಲ್ಲ ಎನ್ನುವುದು ತಿಳಿಯಿತು.
ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಬಂದು ತಪಾಸಣೆ ಮಾಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರವಾರದಿಂದ ಶ್ವಾನ ದಳ, ಬೆರಳಚ್ಚು ತಜ್ಞರು ಬಂದು ತನಿಖೆಯನ್ನು ಆರಂಭಿಸಿದ್ದು, ಮನೆಯ ಮಾಲೀಕರು ಬಂದ ನಂತರವಷ್ಟೇ ನಿಖರವಾಗಿ ಏನೇನು ಕಳೆದು ಹೋಗಿದೆ ಎನ್ನುವುದು ತಿಳಿದು ಬರಬೇಕಿದೆ.