Advertisement
ನಗರ ಮಧ್ಯದಲ್ಲಿರುವ ನಾಗ, ಯಕ್ಷಿ ದೇವರ ಸ್ಥಾನಕ್ಕೆ ಹಿಂದೆ ಗುಡಿಯಿಲ್ಲದೇ, ಗಡಿಯೂ ಇಲ್ಲದೇ ಇರುವುದರಿಂದ ಹಲವಾರು ಬಾರಿ ಅಹಿತಕರ ಘಟನೆಗಳು ನಡೆದಿದ್ದು ಇಂದು ಎಲ್ಲವಕ್ಕೂ ತೆರೆ ಎಳೆದು ಶಾಸಕ ಸುನಿಲ್ ನಾಯ್ಕ ನೇತೃತ್ವದಲ್ಲಿ ಮಾಡಿದ್ದ ನೂತನ ಗುಡಿ ಕಟ್ಟುವ ಸಂಕಲ್ಪ ಹಲವಾರು ಅಡೆ-ತಡೆಗಳ ನಡುವೆ ನೆರವೇರಿದ್ದು ಒಂದು ಐತಿಹಾಸಿಕ ಕ್ಷಣ ಎಂದರೆ ತಪ್ಪಾಗಲಾರದು. ಇದೇ ಮೊದಲ ಬಾರಿಗೆ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಮುಖ್ಯ ರಸ್ತೆಯನ್ನು ಬಳಸಿಕೊಂಡಿದ್ದರೆ ಅದು ರಾಜಾಂಗಣ ನಾಗಬನದ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಮಾತ್ರ ಎನ್ನುವುದು ಭಟ್ಕಳದ ಇತಿಹಾಸದಲ್ಲಿ ದಾಖಲಾಯಿತು.
Related Articles
Advertisement
ಜೈನರ ಆಳ್ವಿಕೆಯಲ್ಲಿ ತಾಲೂಕಿನಲ್ಲಿ ಜೈನ ನಾಗ, ಯಕ್ಷಿ, ಮಾಸ್ತಿ ಹೀಗೆ ಸಾವಿರಾರು ಸ್ಥಳಗಳು ಇದ್ದವು ಎನ್ನುವುದಕ್ಕೆ ಅಲ್ಲಲ್ಲಿ ಇರುವ ಕುರುಹುಗಳು ಸಾಕ್ಷಿ ಹೇಳುತ್ತಿದೆ. ಯಾವುದೇ ಒಂದು ಪ್ರದೇಶದ ದೇವಾಲಯ, ದೈವ ಸ್ಥಳ ಅಜೀರ್ಣಗೊಂಡರೆ ಇಡೀ ಪ್ರದೇಶದ ಜನತೆಗೆ ಅದರಿಂದ ತೊಂದರೆ ಎನ್ನುವುದು ನಮ್ಮ ಧರ್ಮಗ್ರಂಥಗಳು ಸಾರಿ ಹೇಳುತ್ತವೆ. ಅದುವೇ ನಾವು ಭಟ್ಕಳದಲ್ಲಿ ಕೂಡಾ ಕಾಣಬಹುದು. ಭಟ್ಕಳ ನಗರದಲ್ಲಿ ಅನೇಕ ಕಡೆಗಳಲ್ಲಿ ಇನ್ನೂ ಉದ್ಧಾರವಾಗದ ಮನೆಗಳಿವೆ. ಎಲ್ಲಾ ಇದ್ದರೂ ಸಹ ಮಾನಸಿಕ ನೆಮ್ಮದಿಯಿಲ್ಲದ ಅದೆಷ್ಟೋ ಮನಸುಗಳೂ ಇಂದಿಗೂ ಕಾಣ ಸಿಗುತ್ತವೆ. ಆದರೆ ಅವುಗಳೆಲ್ಲವೂ ಅನ್ಯರ ಪ್ರದೇಶಗಳಾಗಿದ್ದರಿಂದ ಇಲ್ಲಿ ಸಮಸ್ಯೆಯ ಮೂಲವೇ ತಿಳಿಯದೇ ಸಂಕಟ ಪಡುತ್ತಿರುವುದು ತಾಜಾ ಉದಾಹರಣೆ ಕೂಡಾ ಇದೆ.
ಅಂತಹ ಜೈನ ಸ್ಥಳಗಳಲ್ಲಿ ರಾಜಾಂಗಣ ನಾಗಬನ ಕೂಡಾ ಒಂದು. ಇಲ್ಲಿ ಹೆಸರೇ ಹೇಳುವಂತೆ ರಾಜರು ತಮ್ಮ ಅಂಗಣದಲ್ಲಿ ಪ್ರತಿಷ್ಟಾಪಿಸಿ ಪೂಜಿಸಿಕೊಂಡು ಬಂದ ಜೈನ ನಾಗ, ಯಕ್ಷಿ ಕ್ಷೇತ್ರವಾಗಿದ್ದು ನಂತರದ ದಿನಗಳಲ್ಲಿ ಜೈನರ ಸಂಖ್ಯೆ ಕಡಿಮೆಯಾಗುತ್ತಾ, ಅನ್ಯರ ಧರ್ಮದವರ ಸಂಖ್ಯೆ ಹಚ್ಚುತ್ತಾ ಹೋದಂತೆ ಇಲ್ಲಿ ಸರಿಯಾದ ಅಭಿವೃದ್ಧಿ, ಪೂಜೆ ನಡೆಯದೇ ಅಜೀರ್ಣಗೊಂಡಿತ್ತು. ಇಲ್ಲಿರುವ ಅನೇಕ ನಾಗರ ಕಲ್ಲುಗಳು ಕೂಡಾ ಭಿನ್ನವಾಗಿತ್ತಲ್ಲದೇ, ಕಳೆದ ಕೆಲವು ವರ್ಷಗಳಿಂದ ಇದೊಂದು ವಿವಾದದ ಕೇಂದ್ರವೂ ಕೂಡಾ ಆಗಿತ್ತು ಎನ್ನುವುದಕ್ಕೆ ಅಲ್ಲಿಯೇ ಒಂದು ಪೊಲೀಸ್ ಪಡೆ ನಿಯೋಜನೆ ಮಾಡಿರುವುದೇ ಉದಾಹರಣೆ ಎನ್ನಬಹುದು.
ಈ ಬಗ್ಗೆ ಹಿಂದೂ ಯುವ ಸಂಘಟನೆಗಳು ಧ್ವನಿಯೆತ್ತುತ್ತಲೇ ಬಂದಿದ್ದರು. ಇಲ್ಲಿನ ಜೀರ್ಣೋದ್ಧಾರಕ್ಕೆ ಸರಕಾರ ಹಣ ಬಿಡುಗಡೆಗೊಳಿಸಿದರೂ ಸಹ ಉಪಯೋಗಿಸಲು ಕಾನೂನು ತೊಡಕು ಎದುರಾಗಿದ್ದರಿಂದ ಹಣ ವಾಪಾಸು ಹೋಗಿತ್ತು. ಇದನ್ನೆಲ್ಲ ಅರಿತ ಶಾಸಕ ಸುನಿಲ್ ನಾಯ್ಕ ತಾವು ಸ್ವತಃ ಇದರ ಜೀರ್ಣೋದ್ಧಾರಕ್ಕೆ ಮುಂದಾದರು. ಜೀರ್ಣೋದ್ಧಾರಕ್ಕೆ ಮುಂದಾಗುತ್ತಲೇ ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಯೊಂದು ಜಾಗದ ಕುರಿತು ಹಾಗೂ ಇದರಿಂದ ಮುಂದೆ ತೊಂದರೆಯಾಗಬಹುದು ಎನ್ನುವ ತಕರಾರು ತೆಗೆಯಿತು. ಈ ಬಗ್ಗೆ ಹಲವಾರು ಸಭೆಗಳೂ ನಡೆದವು, ಇಲಾಖೆಗಳ ಮಧ್ಯ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆದರೂ ಕೂಡಾ ಅಂತಿಮವಾಗಿ ತಮ್ಮ ನಿರ್ಧಾರವನ್ನು ಜಾರಿಗೆ ತಂದ ಸುನಿಲ್ ನಾಯ್ಕ ಸ್ವಂತ ಖರ್ಚಿಯಿಂದ ನಾಗಬನವನ್ನು ಜೀರ್ಣೋದ್ದಾರ ಮಾಡಿ ಅದಕ್ಕೆ ಸೂಕ್ತ ಆಲಯವನ್ನು ಕಟ್ಟಿಸಿ ವಿಜೃಂಬಣೆಯಿಂದ ನಾಲ್ಕು ದಿನಗಳ ಕಾಲ ಪುನರ್ ಪ್ರತಿಷ್ಟೆ, ಅನ್ನ ಸಂತರ್ಪಣೆ ಮಾಡಿ ಇತಿಹಾಸದ ಪುಟ ಸೇರುವಂತೆ ಮಾಡಿರುವುದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.