Advertisement

ಭಟ್ಕಳ: ಪುನೀತ್ ಸ್ಮರಣಾರ್ಥ ನೇತ್ರದಾನ, ಚಿಕಿತ್ಸಾ ಶಿಬಿರ

02:47 PM Dec 26, 2021 | Team Udayavani |

ಭಟ್ಕಳ: ಸರಕಾರ, ಜನಪ್ರತಿನಿಧಿಗಳು ಮಾಡಬೇಕಾಗಿರುವ ಕಾರ್ಯವನ್ನು ಸ್ಪಂದನ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.

Advertisement

ತಾಲೂಕು ಆಸ್ಪತ್ರೆಯಲ್ಲಿನ ನಾಗಯಕ್ಷೆ ಮಾತೃಛಾಯಾ ಸಭಾ ಭವನದಲ್ಲಿ ಸ್ಪಂದನ ಚಾರಿಟೇಬಲ್ ಟ್ರಸ್ಟ್, ಪ್ರಸಾದ ನೇತ್ರಾಯಲ ಉಡುಪಿ, ತಾಲೂಕು ಆಸ್ಪತ್ರೆ ಭಟ್ಕಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಏರ್ಪಡಿಸಲಾದ ನೇತ್ರದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸ್ಪಂದನ ಸಂಸ್ಥೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ, ಬಡ ವಿದ್ಯಾರ್ಥಿಗಳಿಗೆ ವಿದ್ಯೆಗೆ ಸಹಾಯ, ಕೊರೊನಾ ಸಮಯದಲ್ಲಿ ಅನೇಕ ಕುಟುಂಬಗಳಿಗೆ ನೆರವು ಸೇರಿದಂತೆ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ. ತಮ್ಮ ಜನಪ್ರಿಯ ಕಾರ್ಯದ ಮೂಲಕ ಮನೆ ಮಾತಾಗಿರುವ ಸಂಸ್ಥೆಗೆ ತಮ್ಮ ಸಹಕಾರ ಸದಾ ಇದೆ ಎಂದರು.

ಜನರು ಆರೋಗ್ಯದ ಕುರಿತು ಹೆಚ್ಚು ಹೆಚ್ಚು ಕಾಳಜಿ ವಹಿಸಬೇಕು, ಆರೋಗ್ಯ ಸಮಸ್ಯೆ ಬಂದ ಮೇಲೆ ತಪಾಸಣೆ ಮಾಡಿಸಿಕೊಳ್ಳುವುದಕ್ಕಿಂತ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು ಕಣ್ಣಿನ ತಪಾಸಣೆಯನ್ನು ಸಹ ಆಗಾಗ ಮಾಡಿಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.

ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ದೊರೆಯುತ್ತಿದೆ, ಎಲ್ಲಾ ವೈದ್ಯರು ಕೂಡ ಲಭ್ಯರಿದ್ದಾರೆ, ಇಲ್ಲಿನ ಆಸ್ಪತ್ರೆಯನ್ನು ಆಡಳಿತ ವೈದ್ಯಾಧಿಕಾರಿ ಸರಕಾರದ ಅನುದಾನಕ್ಕಿಂತ ಹೆಚ್ಚು ದಾನಿಗಳಿಂದ ಪಡೆದು ಹೈಟೆಕ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡಿದ್ದು ಬೇರೆ ಬೇರೆ ಖಾಸಗೀ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೊರೆಯುವ ಗುಣಮಟ್ಟದ ಚಿಕಿತ್ಸೆ ಇಲ್ಲೇ ಲಭ್ಯವಿದೆ ಎಂದು ಆಸ್ಪತ್ರೆಯ ಕಾರ್ಯವೈಖರಿಯನ್ನು ವೈದ್ಯರು, ಸಿಬ್ಬಂದಿಗಳನ್ನು ಶ್ಲಾಘಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಘವೇಂದ್ರ ನಾಯ್ಕ ವಹಿಸಿದ್ದರು. ಪ್ರಸಾದ ನೇತ್ರಾಯಲ ಉಡುಪಿ ನೇತ್ರ ತಜ್ಞೆ ಡಾ. ಗುಣಶ್ರೀ ಮಾತನಾಡಿ ಜೀವನ ಅತ್ಯಂತ ಚಿಕ್ಕದಾಗಿದೆ, ನಮ್ಮ ಜೀವನದ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗುವುದು ಉತ್ತಮ ಕಾರ್ಯ. ನೇತ್ರದಾನ ವಾಗ್ದಾನ ಮಾಡಿದವರು ತಮ್ಮ ಕುಟುಂಬದವರಿಗೆ ಈ ಬಗ್ಗೆ ತಿಳಿಸಿರಬೇಕು ಎಂದರು.

ವ್ಯಕ್ತಿ ಮೃತ ಪಟ್ಟ ಆರು ಗಂಟೆಯ ಒಳಗಾಗಿ ಕಣ್ಣಿನ ಸಂರಕ್ಷಣೆ ಮಾಡಬೇಕಾಗುತ್ತದೆ ಎಂದ ಅವರು ಉತ್ತಮವಾಗಿರುವ ಕಣ್ಣು ನಾಲ್ವರ ಬಾಳಿಗೆ ಬೆಳಕಾದರೆ, ಎಲ್ಲಾ ಕಣ್ಣುಗಳ ಕೆಲವೊಂದು ಭಾಗವಾದರೂ ಸಹಾಯಕವಾಗುತ್ತದೆ ಪ್ರತಿಯೊಬ್ಬರು ನೇತ್ರದಾನ ಮಾಡುವಂತೆ ಕೋರಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹೆಗ್ಡೆ ಫೌಂಡೇಶನ್‌ನ ಡಾ. ಹರ್ಷಿತ್ ಹೆಗ್ಡೆ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೇತ್ರದಾನ ಮಾಡಿದವರಿಗೆ ನೇತ್ರದಾನದ ಪ್ರಮಾಣ ಪತ್ರವನ್ನು ಅತಿಥಿಗಳು ವಿತರಿಸಿದರು. ಸ್ಪಂದನ ಟ್ರಸ್ಟ್ ನ ಗಂಗಾಧರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು.

ನಂತರ ಪ್ರಸಾದ ನೇತ್ರಾಲಯ ಉಡುಪಿ ತಜ್ಞ ವೈದ್ಯರಿಂದ ನಡೆದ ಉಚಿತ ಚಿಕಿತ್ಸಾ ಶಿಬಿರದಲ್ಲಿ ತಾಲೂಕಿನ ಗ್ರಾಮೀಣ ಭಾಗ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next