ಭಟ್ಕಳ: ದೆಹಲಿಯಲ್ಲಿ ನಾಗರಿಕ ರಕ್ಷಣಾ ಅಧಿಕಾರಿಯಾದ ರಬಿಯಾ ಸೈಫಿ ಎನ್ನುವ ಮಹಿಳೆಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿ ಕ್ರೂರವಾಗಿ ಹತ್ಯೆ ಮಾಡಲಾಗಿದ ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು ಎಂದು ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ, ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಘೋಷಣೆಯನ್ನು ಕೂಗುವ ದೇಶದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ರಕ್ಷಣೆ ಇಲ್ಲವಾಗಿದೆ. ರಾಬಿಯಾ ಸೈಫಿ ಪ್ರಕರಣ ಸೇರಿದಂತೆ ದೇಶದಲ್ಲಿ ನಡೆದ ಮತ್ತು ನಡೆಯುತ್ತಿರುವ ಎಲ್ಲ ರೀತಿಯ ಮಹಿಳಾ ಅತ್ಯಾಚಾರ ಪ್ರಕರಣಗಳು ದೇಶಕ್ಕೆ ಒಂದು ಕಪ್ಪು ಚುಕ್ಕಿಯಾಗಿದೆ ಎಂದರು.
ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ ರಕ್ಷಣಾ ಅಧಿಕಾರಿ ರಾಬಿಯಾರಿಗೆ ರಕ್ಷಣೆ ಸಿಗದೆ ಇದ್ದಾಗ ಇಲ್ಲಿನ ಸಾಮಾನ್ಯ ಮಹಿಳೆಯರ ಪಾಡೇನಾಗಬೇಕು. ದೇಶದ ರಕ್ಷಕರು ಎಲ್ಲಿದ್ದಾರೆ ಎನ್ನುವ ಪ್ರಶ್ನೆಯನ್ನು ಕೇಳುವಂತೆ ಮಾಡಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಈ ಬರ್ಬರ ಹತ್ಯೆಯ ಹಿಂದಿನ ನಿಜವಾದ ಅಪರಾಧಿಗಳನ್ನು ಆದಷ್ಟು ಬೇಗನೆ ಶಿಕ್ಷಿಸಬೇಕು ಮತ್ತು ಈ ಕೃತ್ಯದ ಹಿಂದೆ ಇರುವವರನ್ನು ಬಹಿರಂಗ ಗೊಳಿಸಬೇಕೆಂದು ಹೇಳಿದರು.
ಇದನ್ನೂ ಓದಿ:ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ
ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಜ್ ಎಸ್. ಎಂ., ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶಿಮಜಿ, ಅಬ್ದುಲ್ ರವೂಫ್ ನಾಯ್ತೆ, ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.