Advertisement

ಗ್ರಾಮ ಪಂಚಾಯತ್‍ಗಳಲ್ಲಿ ಕಾನೂನು ಸೇವಾ ಕೇಂದ್ರ ತೆರೆಯಲು ಚಿಂತನೆ : ನ್ಯಾಯಾಧೀಶ ಫವಾಜ್

03:50 PM May 05, 2022 | Team Udayavani |

ಭಟ್ಕಳ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ವತಿಯಿಂದ ಇಲ್ಲಿನ ತಹಸೀಲ್ದಾರ್ ಕಚೇರಿ, ತಾಲೂಕಾ ಆಸ್ಪತ್ರೆ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆಯಲ್ಲಿ ಕಾನೂನು ಸೇವಾ ಕೇಂದ್ರವನ್ನು ಆರಂಭಿಸಲಾಯಿತು.

Advertisement

ಸೇವಾ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮನೆ ಮನೆಗೂ ಕಾನೂನು ಸೇವೆಯನ್ನು ಒದಗಿಸಬೇಕು ಎನ್ನುವ ಉದ್ದೇಶದಿಂದ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವವರಿಗೂ ಕೂಡಾ ಕಾನೂನು ನೆರವು ದೊರೆಯಬೇಕು ಎನ್ನುವುದಾಗಿದೆ.

ಇಂದು ನಗರ ಭಾಗದಲ್ಲಿ ಕಾನೂನು ನೆರವು ಕೇಂದ್ರವನ್ನು ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಆಯ್ದ ಗ್ರಾಮ ಪಂಚಾಯತ್‍ಗಳಲ್ಲಿ ಕೂಡಾ ಕಾನೂನು ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದರು. ಕಾನೂನು ಸೇವಾ ಕೇಂದ್ರದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೇಮಕವಾದ ವಕೀಲರು ವಾರದಲ್ಲಿ ಎರಡು ದಿನ ಇಲ್ಲವೇ ಆರು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ಯಾರೂ ಕೂಡಾ ಬಂದು ಕಾನೂನು ಸಲಹೆ, ಮಾಹಿತಿ, ಸಹಾಯ ಉಚಿತವಾಗಿ ಪಡೆಯಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ ಅವರು ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಇಲ್ಲಿರುವ ವಕೀಲರು ತಮ್ಮಲ್ಲಿಗೆ ಬಂದವರಿಗೆ ಅವರವರಿಗೆ ಅಗತ್ಯವಿರವ ಮಾರ್ಗದರ್ಶನ, ಸಲಹೆ, ಸಹಾಯ ಮಾಡುತ್ತಾರೆ ಎಂದರು.

ಇದನ್ನೂ ಓದಿ : ರ‍್ಯಾಲಿ ಕೇಸ್: ಜಿಗ್ನೇಶ್ ಮೇವಾನಿ ಸೇರಿ ಇತರರಿಗೆ 3 ತಿಂಗಳ ಜೈಲು ಶಿಕ್ಷೆ

Advertisement

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಮಾತನಾಡಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರಿಗೂ ಕೆಲವೊಮ್ಮೆ ಕ್ಲಿಷ್ಟಕರವಾದ ಸಮಸ್ಯೆ ಬರುತ್ತದೆ. ಅಂತಹ ಸಂದರ್ಭದಲ್ಲಿ ವಕೀಲರ ಸಲಹೆ ಅಗತ್ಯವಿರುತ್ತದೆ. ಕೆಲವೊಮ್ಮೆ ಗ್ರಾಮೀಣ ಭಾಗದ ಜನತೆ ಅಪಘಾತ ಇತ್ಯಾದಿಗಳಿಂದ ಆಸ್ಪತ್ರೆಗೆ ಬಂದಾಗ ಅವರಿಗೆ ಪೊಲೀಸ್‍ರಿಗೆ ಮಾಹಿತಿ ನೀಡಬೇಕೆನ್ನುವ ಕನಿಷ್ಟ ತಿಳುವಳಿಕೆಯು ಇರುವುದಿಲ್ಲ. ಅಂತಹ ಗ್ರಾಮೀಣ ಭಾಗದ ಜನರಿಗೆ ಇದರಿಂದ ಪ್ರಯೋಜನವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿಯ ಉಪ ತಹಸೀಲ್ದಾರ್ ವಿಜಯಲಕ್ಷ್ಮೀ ಮಣಿ, ಶಿಶುಅಭಿವೃದ್ಧಿ ಇಲಾಖೆಯ ಸುಶೀಲಾ, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ಮುಂತಾದವರು ಉಪಸ್ಥಿತರಿದ್ದರು.

ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಎನ್. ಎಸ್. ನಾಯ್ಕ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ನಾರಾಯಣ ಯಾಜಿ, ಎಂ.ಜೆ. ನಾಯ್ಕ, ದಾಮೋದರ ನಾಯ್ಕ, ಎಸ್.ಜೆ.ನಾಯ್ಕ ಎಂ.ಟಿ.ನಾಯ್ಕ, ಶಂಕರ ಕೆ. ನಾಯ್ಕ, ನಾರಾಯಣ ನಾಯ್ಕ ವಿವಿಧ ಇಲಾಖೆಯ ಸಿಬ್ಬಂದಿಗಳು, ನಾಗರೀಕರು ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next