Advertisement

ಅರಣ್ಯವಾಸಿಗಳ ಸಭೆಯಲ್ಲಿ ಭಾಗಿಯಾಗದ ಅರಣ್ಯ ಅಧಿಕಾರಿಗಳು : ಪಟ್ಟು ಬಿಡದ ಹೋರಾಟಗಾರರು

08:22 PM Mar 10, 2022 | Team Udayavani |

ಭಟ್ಕಳ: ಅರಣ್ಯವಾಸಿಗಳನ್ನು ಉಳಿಸಿ ಜಾಗೃತ ಅಭಿಯಾನ ಜಾಥಾ ಇಲ್ಲಿನ ನವಾಯತ ಕಾಲೋನಿನ ಬಿಲಾಲ್ ಸಭಾಂಗಣದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಸಭೆಯಲ್ಲಿ ಈ ಹಿಂದೆಯೇ ತಿಳಿಸಿದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿಲ್ಲವಾಗಿದ್ದನ್ನು ಕಂಡು ಅತಿಕ್ರಮಣದಾರರು ಅಧಿಕಾರಿಗಳ ಹಾಜರಾತಿಗೆ ಪಟ್ಟು ಹಿಡಿದರು. ಪೊಲೀಸರು ಸಭಿಕರನ್ನು ಎಷ್ಟು ಸಮಾಧಾನ ಪಡಿಸಲು ನೋಡಿದರೂ ಸಹ ಸಾಧ್ಯವಾಗದೇ ಇರುವಾಗ, ಮಹಿಳೆಯರೂ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನತೆಯ ಒತ್ತಾಯದ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಅವರನ್ನು ಸಭೆಗೆ ಕರೆಯಿಸುವಲ್ಲಿ ಯಶಸ್ವೀಯಾದರು.

Advertisement

ಸಭೆಯಲ್ಲಿ ಮಾತನಾಡಿದ ರಾಜ್ಯ ಅರಣ್ಯವಾಸಿಗಳ ಅಧ್ಯಕ್ಷ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಹಾಗೂ ಕಾನೂನಾತ್ಮಕ ಹೋರಾಟದ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ ಕಳೆದ ಮೂವತ್ತು ವರ್ಷಗಳ ತಮ್ಮ ಹೋರಾಟದ ವಿವಿಧ ಮಜಲುಗಳನ್ನು ಬಿಚ್ಚಿಟ್ಟರು. ಜಿಲ್ಲೆಯಲ್ಲಿ ಅರಣ್ಯವಾಸಿಗಳಿಗೆ ಆಗುತ್ತಿರುವ ತೊಂದರೆ, ಕಿರುಕುಳದ ಕುರಿತು ವಿವರಿಸಿದ ಅವರು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದಂತೆ ಹಾಗೂ ಅವರಿಗೆ ಕಿರುಕುಳ ಕೊಡದಂತೆ ಅನೇಕ ಆದೇಶಗಳಿದ್ದರೂ ಸಹ ಅದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಹೋರಾಟಗಾರ ಇನಾಯತ್ ಶಾಬಂದ್ರಿ ಹೋರಾಟಕ್ಕೆ ಶಕ್ತಿ ಕೊಡುವ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಜ್ಲಿಸೆ ಇಸ್ಲಾ-ವ-ತಂಜೀಮ್ ಎಸ್.ಎಂ. ಪರ್ವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುರ ರಖೀಬ್ ಮಾತನಾಡಿ ಸಂಘಟನಾತ್ಮಕ ಹೋರಾಟದ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆ ಸದಾ ನಿಮ್ಮೊಂದಿಗೆ ಇದೆ ಎನ್ನುವ ಭರವಸೆಯನ್ನು ನೀಡಿದರು.

Advertisement

ಅರಣ್ಯಾಧಿಕಾರಿಗಳಿಂದ ಆಶ್ವಾಸನೆ: ಅರಣ್ಯ ಹಕ್ಕು ಹೋರಾಟ ಸಮಿತಿಯವರು ಬಿಗಿ ಪಟ್ಟು ಅನುಸರಿಸಿದ್ದರಿಂದ ಹಾಜರಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಅವರು ಹಿರಿಯ ಅಧಿಕಾರಿಗಳೊಂದಿಗೆ ಅರಣ್ಯವಾಸಿಗಳ ಸಮಸ್ಯೆಗಳನ್ನು ಚರ್ಚಿಸಿ ಮುಂದಿನ ಇಪ್ಪತ್ತು ದಿನಗಳಲ್ಲಿ ಸ್ಥಳೀಯವಾದ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸುವ ಭರವಸೆಯನ್ನು ನೀಡಿದರು. ಅರಣ್ಯಾಧಿಕಾರಿಗಳು ಯಾರನ್ನೂ ಆತಂಕ್ಕೀಡು ಮಾಡುವ, ಭಯಪಡಿಸುವ ಉದ್ಧೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿಯೂ ಇಲಾಕೆಯ ಸಹಕಾರ ಇದೆ ಎಂದರು.

ವೇದಿಕೆಯಲ್ಲಿ ತೌಸೀಫ್ ಬ್ಯಾರಿ, ಶಿವು ಮರಾಠಿ, ರುಕ್ಮಾ ಮರಾಠಿ, ಖಯೂಂ ಕೋಲಾ, ನಜೀರ್ ಕಾಶಿಮಜಿ, ಲಕ್ಷ್ಮೀ ಮೊಗೇರ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರೋ. ಎ.ಎಂ. ಮುಲ್ಲಾ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಬೆಳಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕ ದೇವರಾಜ್ ಗೊಂಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next