Advertisement
ಮುಟ್ಟಳ್ಳಿಯಲ್ಲಿ ಗುಡ್ಡವೊಂದು ಕುಸಿದು ಮನೆಯ ಮೇಲೆಯೇ ಬಿದ್ದ ಪರಿಣಾಮ ಮನೆಯೊಳಗಿದ್ದ ಲಕ್ಷೀ ನಾರಾಯಣ ನಾಯ್ಕ (48), ಅನಂತ ನಾರಾಯಣ ನಾಯ್ಕ (32), ಲಕ್ಷ್ಮೀ ನಾಯ್ಕ (33), ಪ್ರವೀಣ ಬಾಲಕೃಷ್ಣ ನಾಯ್ಕ (20) ಮನೆಯೊಳಗೆ ಸಿಲುಕಿರುವ ಕುರಿತು ವರದಿಯಾಗಿದೆ. ಗುಡ್ಡ ಕುಸಿದ ತಕ್ಷಣ ಸ್ಥಳೀಯರು ತೆರವುಗೊಳಿಸುವ ಕಾರ್ಯಾಚರಣೆ ಆರಂಭ ಮಾಡಿದ್ದು ನಂತರ ಜೆ.ಸಿ.ಬಿ. ಮೂಲಕ ಮಣ್ಣು ತೆಗೆಯುವ ಕಾರ್ಯ ಮಾಡಲಾಗುತ್ತಿದೆ.
Related Articles
Advertisement
ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಸೇರಿದಂತೆ ನೋಡಲ್ ಅಧಿಕಾರಿಗಳು ರಾತ್ರಿಯಿಂದ ಎಲ್ಲಾ ಅಪಾಯಕಾರಿ ಸ್ಥಳಗಳಿಗೆ ಭೇಟಿ ಮಾಡಿ ಜನರನ್ನು ಸುರಕ್ಷತ ಸ್ಥಳಗಳಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶಾಸಕ ಸುನಿಲ್ ನಾಯ್ಕ ಅವರು ಸಹ ತಮ್ಮ ಕಾರ್ಯಕರ್ತರೊಂದಿಗೆ, ಪಶ್ಚಿಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಸಹ ತಮ್ಮ ಕಾರ್ಯಕರ್ತರೊಂದಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಎನ್.ಡಿ.ಆರ್.ಎಫ್. ತಂಡವೊಂದು ಭಟ್ಕಳಕ್ಕೆ ಬರುತ್ತಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಅನುಕೂಲವಾಗಲಿದೆ. ಅಗ್ನಿಶಾಮಕ ದಳದವರು ರಾತ್ರಿಯಿಂದಲೇ ಶ್ರಮಿಸುತ್ತಿದ್ದು ಅನೇಕ ಕಡೆಗಳಲ್ಲಿ ಜನರ ರಕ್ಷಣೆಗೆ ಧಾವಿಸಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯದಲ್ಲಿದ್ದು, ಪುರಸಭಾ ಅಧಿಕಾರಿಗಳು, ಪೌರಕಾರ್ಮಿಕರು ಜನರ ರಕ್ಷಣೆಗೆ ಮುಂದಾಗಿದ್ದು ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ.
ನಗರದ ಚೌಥನಿ, ಮೂಢಭಟ್ಕಳ ಭಾಗದಲ್ಲಿ ಮನೆಗಳಲ್ಲಿ ಸುಮಾರು 4 ರಿಂದ 8 ಅಡಿಗಳಷ್ಟು ನೀರು ತುಂಬಿದ್ದು ಮನೆಗಳ ಎದುರಿಗೆ ನಿಲ್ಲಿಸಿಟ್ಟ ದ್ವಿಚಕ್ರವಾಹನಗಳು ಕಾರುಗಳು ನೀರಿನಲ್ಲಿ ತೇಲುತ್ತಿದ್ದು ಅತ್ತ ರಕ್ಷಣೆಯನ್ನು ಮಾಡಲಾಗದೆ ಮಾಲಕರು ಪರದಾಡುವ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಒಟ್ಟಾರೆ ಭಟ್ಕಳ ತಾಲೂಕಿನಲ್ಲಿ ಸುಮಾರು 50 ವರ್ಷಗಳಿಂದೀಚೆಗೆ ಇಂತಹ ಮಳೆಯನ್ನು ಕಂಡಿಲ್ಲ ಎನ್ನುವುದು ಹಿರಿಯರ ಅಂಬೋಣವಾಗಿದೆ. ಗ್ರಾಮೀಣ ಪ್ರದೇಶ ಸಂಪೂರ್ಣ ಸಮುದ್ರದೋಪಾದಿಯಲ್ಲಿ ಕಾಣುತ್ತಿದ್ದು ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದೆ. ತಾಲೂಕಿನ ವೆಂಕಟಾಪುರ ನದಿ, ಸಾರದಹೊಳೆ, ಚೌಥನಿಹೊಳೆ, ಶರಾಬಿ ಹೊಳೆಗಳು ಸೇರಿದಂತೆ ಎಲ್ಲಾ ಹೊಳೆಗಳೂ ಉಕ್ಕಿ ಹರಿಯುತ್ತಿದ್ದು ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.