Advertisement

Bhatkal; ಸಚಿವ ವೈದ್ಯ ವಿರುದ್ಧ ಸುನೀಲ ನಾಯ್ಕ ಆರೋಪ ಸತ್ಯಕ್ಕೆ ದೂರ: ಕಾಂಗ್ರೆಸ್

11:22 PM Oct 19, 2023 | Team Udayavani |

ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವರು ಕಚೇರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದ್ದು, ಅವರು ರಾಜ್ಯದ ಸಚಿವರಾಗಿದ್ದು ಸರಕಾರದ ಕಚೇರಿಗಾಗಿ ಜನರ ಅನುಕೂಲಕ್ಕೆ ಸುಸಜ್ಜಿತ ಕಚೇರಿಯನ್ನು ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

Advertisement

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಸಚಿವರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಬರುವಂತಹ ಹೇಳಿಕೆ ನೀಡುವಷ್ಟು ಕೀಳು ಮಟ್ಟದ ರಾಜಕೀಯ ಮಾಡಬಾರದು. ಇವರು ಒಮ್ಮೆ ಹಿಂತಿರುಗಿ ನೋಡಿಕೊಳ್ಳಬೇಕು. ಇವರು ತಾಲೂಕಾ ಪಂಚಾಯತ್‌ನಲ್ಲಿದ್ದ ಕಚೇರಿಯನ್ನು ಬಂದ್ ಮಾಡಿದರು, ತಾಲೂಕಾ ಆಡಳಿತ ಸೌಧದಲ್ಲಿ ಕೇವಲ ರಿಬ್ಬನ್‌ಕಟ್ ಮಾಡುವುದಕ್ಕಷ್ಟೇ ಇವರ ಕಚೇರಿ ಸೀಮಿತವಾಯಿತು. ನಂತರ ಇವರ ಕಚೇರಿ ಇದ್ದುರು ವೈನ್‌ಶಾಪ್ ಹಿಂದುಗಡೆ, ಜನರು ಇವರ ಕಚೇರಿಗೆ ಹೋಗಬೇಕಾಗದರೆ ವೈನ್‌ಶಾಪ್ ದಾಟಿಕೊಂಡೇ ಹೋಗಬೇಕಾಗಿದ್ದುದನ್ನು ಇವರು ಮರೆತಂತಿದೆ ಎಂದೂ ಅವರು ಮಾಜಿ ಶಾಸಕ ಸುನಿಲ್ ನಾಯ್ಕ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಇವರ ಕಚೇರಿಯ ಕುರ್ಚಿ, ಟೇಬಲ್‌ಗಳು ಎಲ್ಲಿಗೆ ಹೋದುವು ಎನ್ನುವುದನ್ನು ಜನತೆಗೆ ತಿಳಿಸುವುದರ ಜೊತೆಗೆ ಇವರ ಆಪ್ತಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದ ಬಾವಮೈದ ಒಂದು ದಿನವೂ ಕಚೇರಿಗೆ ಬಾರದೇ ಜನರ ತೆರಿಗೆಯ ಹಣವನ್ನು ಪಡೆದುಕೊಂಡಿದ್ದು ಇವರ ನೆನಪಿನಲ್ಲಿ ಇಲ್ಲವೇ ಎಂದೂ ಹೇಳಿದರು.

ಸಚಿವರು ಜನತೆಯ ಅನುಕೂಲಕ್ಕಾಗಿ ಸಹಾಯಕ ಆಯುಕ್ತರ ಹಳೇ ಕಚೇರಿಯನ್ನು ನವೀಕರಣ ಮಾಡಿಸಿದ್ದಾರೆ, ನವೀಕರಣ ಮಾಡುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದು ಸರಕಾರದ ನಿಯಮದಂತೆ ನವೀಕರಣ ಮಾಡುವುದನ್ನು ಬಿಟ್ಟು ಮನಬಂದಂತೆ ನವೀಕರಣ ಮಾಡಲು ಅವಕಾಶವಿಲ್ಲ, ಮಾಜಿ ಶಾಸಕರು ಹೇಳಿದಂತೆ ಕಚೇರಿ ನವೀಕರಣದಲ್ಲಿ ಆಡಂಬರವಿಲ್ಲ ಎಂದರು. ಸಚಿವರ ಕಚೇರಿ ನವೀಕರಣದ ಬಗ್ಗೆ ನಿಖರವಾದ ಮಾಹಿತಿ ಬೇಕಾದಲ್ಲಿ ಮಾಜಿ ಶಾಸಕರು ಲೋಕೋಪಯೋಗಿ ಇಲಾಖೆಗೆ ಹೋಗಿ ವಿವರ ಪಡೆದು ಜನತೆಗೆ ಸತ್ಯವನ್ನು ತಿಳಿಹೇಳಲಿ ಎಂದ ಅವರು ಗಾಳಿಯಲ್ಲಿ ಗುಂಡು ಹೊಡೆಯುವ ಪ್ರವೃತ್ತಿಯನ್ನು ಇನ್ನಾದರೂ ಬಿಡಲಿ ಎಂದು ಹೇಳಿದರು.

ಸಚಿವರು ಮುಖ್ಯಮಂತ್ರಿ ಪರಿಹಾರದಡಿಯಲ್ಲಿ ಅನಾರೋಗ್ಯ ಪೀಡಿತರಿಗೆ ಹಣ ಮಂಜೂರಿಸಿಕೊಂಡು ಬಂದಿಲ್ಲ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಒಂದೂ ಗುದ್ದಲಿ ಪೂಜೆ ನಡೆದಿಲ್ಲ ಎಂದು ಮಾಜಿ ಶಾಸಕರು ಆರೋಪಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ.

ಸಚಿವರು ಮುಖ್ಯಮಂತ್ರಿ ಪರಿಹಾರನಿಧಿಯಡಿಯಲ್ಲಿ ಈಗಾಗಲೇ 28.17 ಲಕ್ಷ ರೂಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಸಚಿವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಮಾಜಿ ಶಾಸಕರಂತೆ ಹಿಂದಿನ ಸಿದ್ಧರಾಮಯ್ಯ ಸರಕಾರದಲ್ಲಿ ಮಂಕಾಳ ವೈದ್ಯರು ಮಂಜೂರು ಮಾಡಿಸಿ ಗುದ್ದಲಿ ಪೂಜೆ ಮಾಡಿದ್ದನ್ನೇ ಮತ್ತೆ ಮತ್ತೆ ಗುದ್ದಲಿ ಪೂಜೆ ಮಾಡಿಲ್ಲ. ತಮ್ಮ ಕಾರಿನಲ್ಲಿಯೇ ಗುದ್ದಲಿ, ಹಾರೆ ಇಟ್ಟುಕೊಂಡು ತಿರುಗಿಲ್ಲ ಎಂದ ಅವರು ಮಾಜಿ ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಏನೇನು ಮಾಡಿದ್ದಾರೆಂದು ಒಮ್ಮೆ ಅವಲೋಕನ ಮಾಡಿಕೊಳ್ಳಲಿ. ಇವರು ಸುಳ್ಳು ಹೇಳಿದ್ದರಿಂದಲೇ ಜನತೆ ಇವರನ್ನು ಅತೀ ಹೆಚ್ಚಿನ ಮತಗಳಿಂದ ತಿರಸ್ಕರಿಸಿದ್ದಾರೆ. ಮಾಜಿ ಶಾಸಕರು ಇನ್ನಾದರೂ ತಮ್ಮ ನಡವಳಿಕೆಯನ್ನು ಸರಿ ಮಾಡಿಕೊಳ್ಳಲಿ. ಸುಳ್ಳು ಹೇಳುವುದನ್ನು ಬಿಡಲಿ. ಸಚಿವರ ಕಚೇರಿಗೆ ಸರಕಾರಿ ಕಚೇರಿಯಾಗಿದ್ದು ಅದು ಪ್ರತಿಯೊಬ್ಬರಿಗೂ ತೆರೆದಿದೆ, ಅವರೂ ಬಂದು ಬೇಕಾದರೆ ತಮ್ಮ ಕೆಲಸ ಏನಿದ್ದರೂ ಮಾಡಿಕೊಂಡು ಹೋಗಬಹುದು ಎಂದೂ ಸಲಹೆ ನೀಡಿದ್ದಾರೆ. ಸಚಿವರಾಗಿರುವ ಮಂಕಾಳ ವೈದ್ಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಮಾಜಿ ಶಾಸಕ ಸುನೀಲ ನಾಯ್ಕ ಅಭಿವೃದ್ಧಿಗೆ ಸಹಕರಿಸುವ ಕೆಲಸ ಮಾಡಲಿ ಎಂದು ಹೇಳಿದರು.

Advertisement

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಅಂದು ಮಂಕಾಳ ವೈದ್ಯರು ಮಂಜೂರಿ ಮಾಡಿಸಿಕೊಂಡು ಬಂದಿದ್ದ ತಾಲೂಕಾ ಆಡಳಿತ ಸೌಧಕ್ಕೆ ಕನಿಷ್ಟ ಪೀಠೋಪಕರಣ ಮಂಜೂರಿ ಮಾಡಿಸಿಕೊಂಡು ಬರಲು ಸುನಿಲ್ ನಾಯ್ಕ ಅವರಿಂದ ಸಾಧ್ಯವಾಗಿಲ್ಲ, ಅದಕ್ಕೂ ಮಂಕಾಳ ವೈದ್ಯರು ಮತ್ತೆ ಆರಿಸಿ ಬರಬೇಕಾಗಿ ಬಂತು. ಅಂದು ತಾಲೂಕಾ ಆಡಳಿತ ಸೌಧದ ಉದ್ಘಾಟನೆಯಲ್ಲಿ ಇದೇ ಮಾತನ್ನು ಹೇಳದ ನನ್ನನ್ನು ಮಹಿಳೆಯಂತೆ ಕಾಣದೇ ಟ್ರೋಲ್ ಮಾಡಿದ್ದನ್ನು ಸ್ಮರಿಸಿಕೊಂಡ ಅವರು ಇವರ ಶೂನ್ಯ ಸಾಧನೆ ತಿಳಿದುಕೊಂಡೇ ಇವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ ಎಂದರು.

ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ಗುದ್ದಲಿ ಪೂಜೆ ಮಾಡಿಲ್ಲ ಎನ್ನುವುದು ಇವರ ಮನಸ್ಥಿತಿಯನ್ನು ತೋರಿಸುತ್ತದೆ. ಮಾಜಿ ಶಾಸಕರ ಹಾಗೆ ಗುದ್ದಲಿಯನ್ನು ಹಿಡಿದುಕೊಂಡು ತಿರುಗುವ ಜಾಯಮಾನ ನಮ್ಮ ಸಚಿರದ್ದಲ್ಲ, ಅವರು ಏನಿದ್ದರೂ ಅಭಿವೃದ್ಧಿಯನ್ನಷ್ಟೇ ನೋಡುತ್ತಾರೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಸಹಿಸಲು ಸಾಧ್ಯವಾಗದೇ ಗುದ್ದಲಿಯನ್ನು ಎದುರು ತಂದಿದ್ದಾರೆ ಎಂದರು.

ಪ್ರಮುಖರಾದ ತಂಜೀಮ್ ಮಾಜಿ ಅಧ್ಯಕ್ಷ ಎಸ್.ಎಂ. ಪರ್ವೇಜ್ ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ತಾ.ಪಂ. ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ವಿಷ್ಣು ದೇವಾಡಿಗ, ನಾರಾಯಣ ನಾಯ್ಕ, ದೇವಿದಾಸ ಆಚಾರಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next