Advertisement

Bhatkal: ವಂಶವೃಕ್ಷ ಪಡೆಯುವ ಪದ್ಧತಿ ಸರಳೀಕರಣಗೊಳಿಸಿ

06:37 PM Aug 31, 2023 | Team Udayavani |

ಭಟ್ಕಳ: ಕುಟುಂಬದ ವಂಶವೃಕ್ಷ ಪಡೆಯಲು ಮೃತರ ಮರಣ ದಾಖಲೆ ಕೇಳುತ್ತಿರುವುದರಿಂದ ಅನೇಕ ಕುಟುಂಬಗಳಿಗೆ ತೊಂದರೆಯಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಕೋರಿ ಉತ್ತರ ಕನ್ನಡ ಜಿಲ್ಲಾ ದಿ. ಡಿ. ದೇವರಾಜು ಅರಸು ವಿಚಾರ ವೇದಿಕೆಯಿಂದ ಸಹಾಯಕ ಆಯುಕ್ತೆ ಡಾ| ನಯನಾ ಎನ್‌.ಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿಯನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲಾಧಿಕಾರಿಗಳಿಗೂ ಕಳುಹಿಸಲಾಗಿದ್ದು, ಮನವಿಯಲ್ಲಿ ಈ ಹಿಂದೆ ಗ್ರಾಮದಲ್ಲಿ ಯಾವುದೇ ಕುಟುಂಬಕ್ಕೆ ಜೀವಂತ ಸದಸ್ಯರ ಪ್ರಮಾಣ ಪತ್ರ ಅಥವಾ ವಂಶವೃಕ್ಷ ಅಗತ್ಯವಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಂಚನಾಮೆ ತಯಾರಿಸಿ ಮಾಡಿಕೊಡುತ್ತಿದ್ದರು. ಆದರೆ ಗಣಕೀಕೃತ ಪದ್ಧತಿ ಜಾರಿಯಾದ ಮೇಲೆ ಈ ಪದ್ಧತಿ ನಿಂತು ಹೋಗಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಹಲವು ಕುಟುಂಬಗಳಲ್ಲಿ ತಮ್ಮ ಹಿರಿಯರ ಮರಣ ದಾಖಲೆಗಳೇ ಇಲ್ಲವಾಗಿದ್ದು, ಅವರೆಲ್ಲರೂ ವಂಶವೃಕ್ಷಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಹಿಂದೆ ಮರಣ ಹೊಂದಿದವರ ಮರಣ ದಾಖಲೆ ಮಾಡಬೇಕೆನ್ನುವ ಪರಿಕಲ್ಪನೆ ಕೂಡಾ ಇಲ್ಲದ ಜನತೆ ಹಾಲಿ ತಮ್ಮ ಜಮೀನು ವಾರಸಾ ಮಾಡಲು, ಇತರೆ ಕೆಲಸ ಕಾರ್ಯಗಳಿಗೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಲಾಗಿದೆ.

ಈ ಹಿಂದಿನಂತೆಯೇ ಗ್ರಾಮ ಲೆಕ್ಕಾಧಿಕಾರಿಗಳು ಮರಣ ದಾಖಲೆ ಲಭ್ಯವಿಲ್ಲದ ಪ್ರಕರಣಗಳಲ್ಲಿ ಪಂಚರ ಅಭಿಪ್ರಾಯ ಪಡೆದು ಪ್ರಮಾಣ ಪತ್ರ ನೀಡುವಂತಾಗಬೇಕು ಎಂದೂ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ್‌, ಗಣಪತಿ ನಾಯ್ಕ ಜಾಲಿ, ವಿಷ್ಣು ದೇವಾಡಿಗ ಬೆಂಗ್ರೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next