Advertisement

ಭಟ್ಕಳ: ಎಸ್ ಪಿ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

07:50 PM Jul 25, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಎಸ್ ಪಿ ಸುಮನ್ ಪೆನ್ನೇಕರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಅರ್ಬನ್ ಬ್ಯಾಂಕ್ ಹಫಿಸ್ಕಾ ಹಾಲ್‌ನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಯೇ ಎದುರಾಯಿತು.

Advertisement

ಪ್ರಥಮವಾಗಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು ನಗರ ಹಾಗೂ ಹೆದ್ದಾರಿಯಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಎಳೆಎಳೆಯಾಗಿ ನಾಗರೀಕರು ಬಿಚ್ಚಿಟ್ಟರು. ಪಟ್ಟದ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವುದು, ಅಂಗಡಿಕಾರರು ತಮ್ಮ ಬೋರ್ಡುಗಳನ್ನು ಫುಟ್‌ಪಾತ್‌ನಲ್ಲಿಡುವುದು ಇತ್ಯಾದಿಗಳ ಪ್ರಸ್ತಾಪ ಮಾಡಿದರಲ್ಲದೇ ಹಲವಾರು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದರಿಂದ ಪಾರ್ಕಿಂಗ್‌ಗೋಸ್ಕರ ಪ್ರತ್ಯೇಕ ಸ್ಥಳ ನಿಗದಿಗೊಳಿಸಬೇಕು ಎಂದೂ ಆಗ್ರಹಿಸಿದರು.

ಭಟ್ಕಳದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯಾಗಬೇಕೆನ್ನುವ ಬೇಡಿಕೆ ಹಲವಾರು ವರ್ಷಗಳಿಂದ ಇದ್ದರೂ ಸಹ ಇನ್ನೂ ತನಕ ಮಂಜೂರಿ ದೊರೆತಿಲ್ಲ ಎಂದೂ ತಿಳಿಸಿದರು. ನಗರದಲ್ಲಿ ಚಿಕ್ಕ ಮಕ್ಕಳು ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವುದ, ಮೊಬೈಲ್‌ಗಳಲ್ಲಿ ಮಾತನಾಡುತ್ತಾ ನಿರ್ಲಕ್ಷದಿಂದ ವಾಹನ ಚಲಾಯಿಸುವು ಇತ್ಯಾದಿಗಳು ಕುರಿತು ಕ್ರಮ ಆಗಬೇಕೆಂದರು.

ನಗರದದಲ್ಲಿನ ಡಾಂಬರ್ ರಸ್ತೆಗಳು ಕಿತ್ತು ಹೋಗಿದ್ದು ಅಪಘಾತಗಳಾಗುವ ಸಾಧ್ಯತೆ ಇದೆ. ಭಟ್ಕಳ ನಗರದಲ್ಲಿ ಅತ್ಯಂತ ಹೆಚ್ಚು ವಾಹನಗಳಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ನಗರದಲ್ಲಿ ಪಿಲ್ಲರ್ ಹಾಕಿ ಫ್ಲೈ ಓವರ್ ಮಾಡಬೇಕು. ರ‍್ಯಾಂಪ್ ಮಾಡಿದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುವುದಲ್ಲದೇ ತೀವ್ರ ತೊಂದರೆಯಾಗಲಿದೆ. ನಾಗರಿ ಕರು ಈಗಾಗಲೇ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದು ಆ ಪ್ರಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.

ಭಟ್ಕಳ ಒಂದು ಸೂಕ್ಷ್ಮ ಪ್ರದೇಶವಾಗಿದ್ದು ಕೆ.ಎಸ್.ಆರ್.ಪಿ. ತುಕಡಿ ಇಡಬೇಕೆನ್ನುವ ಬೇಡಿಕೆ ಇದ್ದು ಈಗಾಗಲೇ ಜಾಗ ಕೂಡಾ ನೋಡಲಾಗಿದೆ, ಆದರೆ ವಿಳಂಬಕ್ಕೆ ಕಾರಣ ಮಾತ್ರ ತಿಳಿದಿಲ್ಲ. ಹೆಬಳೆ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಪಕ್ಕದಲ್ಲಿಯೇ ಕಸ ರಾಶಿ ಹಾಕುವುದರಿಂದ ನಾಯಿಗಳು, ದನಗಳು ರಸ್ತೆಯಲ್ಲಿ ಅಡ್ಡ ಬಂದು ಅಪಘಾತಗಳಾಗುತ್ತಿದೆ. ರಾತ್ರಿ ಹೊತ್ತು ಐಷಾರಾಮಿ ಕಾರುಗಳಲ್ಲಿ ಬಂದು ದನಗಳ್ಳತನ ಮಾಡಲಾಗುತ್ತಿದೆ. ನೋಡಿದವರನ್ನು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಲಾಗುತ್ತಿದೆ. ಗೋಹತ್ಯೆ ನಿಷೇಧವಿದ್ದರೂ ಗೋಹತ್ಯೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಗೋವುಗಳನ್ನು ಕಳ್ಳತನ ಮಾಡಿ ವಧೆ ಮಾಡಲಾಗುತ್ತಿದೆ.ನಗರದಲ್ಲಿ ವರ್ಷದಲ್ಲಿ 15 ದಿನ ರಮ್ಜಾನ್ ಮಾರ್ಕೆಟ್ ಎಂದು ಮುಖ್ಯ ರಸ್ತೆ ಬಂದ್ ಮಾಡಲಾಗುತ್ತಿದೆ, ಗೋಹತ್ಯೆ ಬಂದಾಗಬೇಕು, ಶಾಲಾ ಟೆಂಪೋಗಳು ಅತಿಯಾದ ವೇಗದಲ್ಲಿ ಓಡುತ್ತಿದೆ. ಗ್ರಾಮೀಣ ಭಾಗದಲ್ಲಿ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಸರಾಯಿ ಮಾರಲಾಗುತ್ತಿದೆ, ಮಟ್ಕಾ, ಜೂಜು ಅವ್ಯಾಹತವಾಗಿ ನಡೆಯುತ್ತಿದೆ ಎಂದೂ ದೂರು ಕೇಳಿ ಬಂತು. ಟ್ರಾಫಿಕ್ ಸಮಸ್ಯೆಯ ಚರ್ಚೆಯ ಸಂದರ್ಭದಲ್ಲಿ ಈ ಕುರಿತು ನಾಗರಿಕರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡಬೇಕು, ಶಾಲಾ ಕಾಲೇಜುಗಳಲ್ಲಿ ಸಾರಿಗೆ ನಿಯಮಗಳ ಕುರಿತು ತಿಳಿವಳಿಕೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

Advertisement

ಮುರ್ಡೇಶ್ವರ ಬೀಚ್‌ನಲ್ಲಿ ಪ್ರತಿ ವರ್ಷ ಅನಾಹುತಗಳಾಗುತ್ತಿವೆ, ಪೊಲೀಸ್ ಇಲಾಖೆಯ ಸೂಕ್ತ ಕ್ರಮಕ್ಕೆ ಮುಂದಾಗಬೇಕು, ಮುರ್ಡೇಶ್ವರ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೇ ತೊಂದರೆಯಾಗಿದೆ. ಲಕ್ಷಾಂತರ ಜನರು ಬರುವುದರಿಂದ ನಡು ರಸ್ತೆಯೇ ಪಾರ್ಕಿಂಕ್ ಹಬ್ ಆಗಿ ಮಾರ್ಪಾಡಾಗುತ್ತಿದ್ದು ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಯಿತು. ನಗರದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಸಿಟಿವಿ ಅಳವಡಿಸಿದ್ದು ಅವರ ನಿರ್ವಹಣೆಯಾಗುತ್ತಿಲ್ಲ, ನಿರ್ವಹಣೆಗೆ ಪ್ರತ್ಯೇಕ ಬಜೆಟ್ ವ್ಯವಸ್ಥೆಯಾಗಬೇಕು, ನಗರದಲ್ಲಿ ತಡರಾತ್ರಿ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆ ಮಾಡಬೇಕು. ನಗರ ಮಧ್ಯದಲ್ಲಿ ಮೀನು ಮಾರುಕಟ್ಟೆ ಇರುವುದರಿಂದ ಪಕ್ಕದ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರಕ್ಕೆ ತೊಂದರೆಯಾಗುತ್ತಿದೆ. ಬೆಳಗಾವಿಯ ತಂಡವೊಂದು ಸ್ವಸಹಾಯ ಗುಂಪು ರಚನೆಯ ಹೆಸರಿನಲ್ಲಿ ವಂಚನೆ ಮಾಡಿಕೊಂಡು ಹೋಗಿದ್ದಾರೆ ಅವರ ಮೇಲೆ ಕ್ರಮ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಂತಾರಾಮ ಭಟ್ಕಳ್, ಶ್ರೀಕಾಂತ ನಾಯ್ಕ, ಎ.ಎಂ.ಮುಲ್ಲಾ ಇನಾಯತುಲ್ಲಾ ಶಾಬಂದ್ರಿ, ತೌಫೀಕ್ ಬ್ಯಾರಿ, ಇರ್ಷಾದ್, ಎಂ.ಆರ್.ನಾಯ್ಕ, ಶ್ರೀಧರ ಹೆಬ್ಬಾರ್, ಅಬ್ದುಲ್ ರವೂಫ್, ಎಸ್.ಎಂ. ಪರ್ವೇಜ್, ಸುಜಾತಾ ಶೇಟ್, ಶಾಹೀನ್ ಶೇಖ್, ಶನಿಯಾರ ನಾಯ್ಕ, ಸವಿತಾ ಶೇಟ್, ಗಣಪತಿ ನಾಯ್ಕ, ಅಬ್ದುಲ್ ಜಬ್ಬಾರ್, ಆಸಿಫ್ ಶೇಖ್, ಶ್ರೀಧರ ನಾಯ್ಕ, ವೆಂಕಟೇಶ ನಾಯ್ಕ, ರಾಮಚಂದ್ರ ಮೊಗೇರ, ಕೃಷ್ಣಾ ನಾಯ್ಕ ಮುರ್ಡೇಶ್ವರ ಮುಂತಾದವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next