ಭಟ್ಕಳ: ತಾಲೂಕಿನಲ್ಲಿ ಮುಂದುವರಿದ ವರುಣನ ಆರ್ಭಟದಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ ಹಳ್ಳ, ನದಿಗಳು ಉಕ್ಕಿ ಹರಿಯುತ್ತಿದ್ದು ಯಾವ ಸಂದರ್ಭದಲ್ಲಿಯೂ ಕೂಡಾ ನೆರೆಹಾವಳಿಯಾಗುವ ಸಾಧ್ಯತೆ ಇದೆ.
ತಾಲೂಕಿನಲ್ಲಿ ರವಿವಾರ ಬೆಳಿಗ್ಗೆಯ 24 ಗಂಟೆಗಳಲ್ಲಿ 39.4 ಮಳೆಯಾಗಿದ್ದು ಇಲ್ಲಿನ ತನಕ ಒಟ್ಟೂ 1808.02 ಮಿ.ಮಿ. ಮಳೆಯಾದಂತಾಗಿದೆ. ರವಿವಾರ ಬೆಳಿಗ್ಗೆಯಿಂದ ಸಂಜೆಯ ತನಕ ಎಡೆಬಿಡದೇ ಸುರಿದ ಮಳೆಯಿಂದಾಗಿ ಹಲವೆಡೆ ನೆರೆಹಾವಳಿಯ ಭೀತಿ ಉಂಟಾಗಿದ್ದು ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಜನರು ಮನೆಯಿಂದ ಹೊರ ಬರದಂತೆ ದಿಗ್ಬಂಧನ ಹಾಕಿದಂತಾಗಿತ್ತು. ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ತೀವ್ರ ಪರದಾಡುವಂತಾಗಿದ್ದು ಗ್ರಾಮೀಣ ಭಾಗದಲ್ಲಿಯ ರಸ್ತೆಗಳೂ ಕೂಡಾ ಇದಕ್ಕೆ ಹೊರತಾಗಿಲ್ಲ ಎನ್ನುವಂತಾಗಿದೆ.
ಅನೇಕ ಕಡೆಗಳಲ್ಲಿ ಗ್ರಾಮೀಣ ರಸ್ತೆಗಳು ಕೊಚ್ಚಿಹೋಗಿದ್ದು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರಕಾರ ಕಣ್ಣಿದ್ದೂ ಕುರುಡಾಗಿದೆ ಎನ್ನುವಂತಾಗಿದೆ.
ಯಾವುದೇ ಸಮಸ್ಯೆಗೆ ತುರ್ತು ಪರಿಹಾರ ದೊರೆಯದ ಕಾರಣ ಜನತೆ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
ನಿತ್ಯದ ಪರದಾಟ: ಕಳೆದ 4-5ವರ್ಷಗಳಿಂದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಪರದಾಟ ಎನ್ನುವಂತಾಗಿದ್ದು ರವಿವಾರ ಮಾತ್ರ ಸುಮಾರು 3 ರಿಂದ 4 ಅಡಿ ನೀರು ಹೆದ್ದಾರಿಯಲ್ಲಿ ನಿಂತಿದ್ದರಿಂದ ವಾಹನಗಳು ಸುಮಾರು ಅರ್ಧ ಕಿ.ಮಿ.ಗೂ ಹೆಚ್ಚು ದೂರವನ್ನು ಕ್ರಮಿಸುವುದಕ್ಕೆ 15 ನಿಮಿಷ ಬೇಕಾಗುವಂತಾಗಿದೆ.
ಬೆಳಿಗ್ಗೆಯಿಂದ ಸಂಜೆಯ ತನಕವೂ ಒಂದೇ ರೀತಿಯಾಗಿದ್ದು ಅಂಬುಲೆನ್ಸ್ ಗಳೂ ಕೂಡಾ ಈ ಭಾಗವನ್ನು ದಾಟಲು ಸುಮಾರು 10 ನಿಮಿಷಕ್ಕೂ ಹೆಚ್ಚು ಸಮಯ ಹಿಡಿಯುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾದಂತಾಗಿದೆ.
ಎಲ್ಲಿಯೋ ದೂರದಿಂದ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮವಾಗಿ ಸಾಗಿ ಆಸ್ಪತ್ರೆಗೆ ಹೋಗಬಹುದು ಎನ್ನುವ ನಂಬಿಕೆಯಿಂದ ಅಂಬುಲೆನ್ಸ್ ನಲ್ಲಿ ಬರುವ ರೋಗಿ ಹಾಗೂ ರೋಗಿಯ ಪಾಲಕ ಚಿಂತನೆ ಹುಸಿಯಾಗಿ ಆಸ್ಪತ್ರೆಗೆ ಬೇಗ ತಲುಪುವ ಅವರನ್ನು ಹಕ್ಕನ್ನು ಕೂಡಾ ಹೆದ್ದಾರಿ ಇಲಾಖೆ ಕಸಿದುಕೊಂಡಿರುವುದು ತೀವ್ರ ಖೇದಕರ ವಿಷಯವಲ್ಲದೇ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.
ನೀರಿನಲ್ಲಿ ತೇಲಿದ ಸಚಿವರ ಕಾರು: ರಂಗಿನಕಟ್ಟೆಯಲ್ಲಿನ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸುಮಾರು ಅರ್ಧ ಕಿ.ಮಿ.ಗಟ್ಟೆಲೆ ವಾಹನಗಳು ಸಾಲು ಸಾಲಾಗಿ ನಿಂತಿದ್ದರೆ ಇದೇ ಹೆದ್ದಾರಿಯಲ್ಲಿ ಬಂದ ಸಚಿವರ ಬೆಂಗಾವಲು ವಾಹನ ಹಾಗೂ ಸಚಿವರ ವಾಹನ ಕೂಡಾ ಸುಮಾರು10 ನಿಮಿಷಗಳ ಕಾಲ ಕಾಯುವಂತಾಯಿತು. ಬೆಂಗಾವಲು ವಾಹನ ಹೆದ್ದಾರಿಯ ಹಳ್ಳ ದಾಟಿದರೂ ಕೂಡಾ ಸಚಿವರ ಕಾರು ಮಾತ್ರ ಹಳ್ಳದಲ್ಲಿ ತೇಲಿ ಬಂದಂತೆ ದಾಟಿ ಹೋಗಿರುವುದು ಮಾತ್ರ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು. ಪ್ರತಿ ಬಾರಿಯೂ ಇದೇ ಪರಿಸ್ಥಿತಿ ಇದ್ದರೂ ಕೂಡಾ ಸರಕಾರವಾಗಲೀ, ಅಧಿಕಾರಿಗಳಾಗಲೀ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳದಿರುವುದು ನಿತ್ಯ ಪ್ರಯಾಣಿಕರು ಗೋಳನ್ನು ಅನುಭವಿಸುವಂತಾಗಿದೆ.
ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕಾಗಿ ಟೋಲ್ ನೀಡುತ್ತಿದ್ದರೆ ಇಲ್ಲಿ ನೀರಿನಲ್ಲಿ ತೇಲಿ ಹೋದರೂ ಟೋಲ್ ವಸೂಲಿ ಮಾತ್ರ ನಿಂತಿಲ್ಲ.
ಐ.ಆರ್.ಬಿ. ಕೆಲಸ ಮಾಡುತ್ತಿರುವಾಗ ಗುಡ್ಡದ ಕುಸಿತದಿಂದಾಗಿ ಮಣ್ಣು ಹೊಳೆಯಲ್ಲಿ ತುಂಬಿಕೊಂಡು ನೀರು ಸರಾಗವಾಗಿ ಹೋಗಲು ಅಡತಡೆಯಾಗಿ ಮನೆಗೆ ನುಗ್ಗಲು ಕಾರಣವಾಗಿದೆ. ರಂಗೀಕಟ್ಟೆಯಲ್ಲಿ ನೀರು ಶೇಡ್ಕುಳಿ ಹೊಂಡಕ್ಕೆ, ಕೋಗ್ತಿಕೆರೆಗೆ ಹೋಗುತ್ತಿತ್ತು. ಈಗ ನೀರು ಹೋಗಲು ಜಾಗಾ ಇಲ್ಲದೇ ಇರುವುದರಿಂದ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ತಕ್ಷಣ ಹೆದ್ದಾರಿ ಇಲಾಖೆಯವರು ತಾತ್ಕಾಲಿಕವಾಗಿ ಹಿಂದೆ ನೀರು ಹೋಗುತ್ತಿದ್ದ ದಾರಿ ಬಿಡಿಸಿಕೊಡಬೇಕು. ಅಂಬುಲೆನ್ಸ್ ಗಳಿಗೆ ಕೂಡಾ ಹೋಗಲು ಸಾಧ್ಯವಾಗುತ್ತಿಲ್ಲ ಇದು ಖಂಡನೀಯವಾಗಿದ್ದು ತಕ್ಷಣ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು.
– ಅಬ್ದುಲ ಮಜೀದ್, ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ