ಹೊಸದಿಲ್ಲಿ : ಕಳೆದ ತಿಂಗಳಲ್ಲಿ ಪಂಜಾಬಿನ ಅಮೃತಸರ ಸಮೀಪ ರೈಲು ಹಳಿಯಲ್ಲೇ ನಿಂತು ರಾವಣ ದಹನ ನೋಡುತ್ತಿದ್ದವರ ಪೈಕಿ ಕನಿಷ್ಠ 61 ಮಂದಿ ರೈಲಿನಡಿ ಬಿದ್ದು ಮೃತಪಟ್ಟ ಘಟನೆಯನ್ನು ಪೂರ್ತಿಯಾಗಿ ಮರತಂತಿರುವ ಜನರು, ಭಟಿಂಡಾ ಸಮೀಪ ರೈಲು ಹಳಿಯಲ್ಲೇ ಛಾತ್ ಪೂಜಾ ಆಚರಿಸಿದ್ದಾರೆ. ಕೇವಲ ತಿಂಗಳ ಹಿಂದಷ್ಟೇ ನಡೆದಿದ್ದ ಆ ದಾರುಣ ಘಟನೆಯನ್ನು ಇಷ್ಟು ಬೇಗನೆ ಜನರು ಮರೆತಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ವಾರದ ಆರಂಭದಲ್ಲಿ ಭಟಿಂಡಾ ಸಮೀಪ ಸ್ಥಳೀಯರು ಛಾತ್ ಪೂಜಾ ಆಚರಿಸಲು ಅತ್ಯಂತ ದಟ್ಟನೆಯ ರೈಲು ಹಳಿಯನ್ನು ಕ್ರಾಸ್ ಮಾಡಿ ಛಾತ್ ಪೂಜೆಯಲ್ಲಿ ಪಾಲ್ಗೊಳ್ಳಲು ನುಗ್ಗಿರುವುದು ಕಂಡು ಬಂದಿದೆ. ಸ್ಥಳೀಯಾಡಳಿತೆಯವರು ಜನರಿಗೆ ರೈಲು ಹಳಿಯ ಮೇಲೆ ನಿಲ್ಲದಂತೆ ಎಷ್ಟೇ ಮನವಿ ಮಾಡಿಕೊಂಡರೂ ಅವರದನ್ನು ಒಂದಿಷ್ಟೂ ಲೆಕ್ಕಿಸಲಿಲ್ಲ.
ಛಾತ್ ಪೂಜೆಗಾಗಿ ನಿರ್ದಿಷ್ಟ ಲೆವೆಲ್ ಕ್ರಾಸಿಂಗ್ ಗಳನ್ನು ಮಾತ್ರವೇ ಬಳಸಬೇಕು ಎಂಬ ಸ್ಥಳೀಯಾಡಳಿತೆಯ ಸೂಚನೆಗಳನ್ನು ಜನರು ಸಂಪೂರ್ಣವಾಗಿ ನಿರ್ಲಕ್ಷಿಸಿದರು.
ಸಣ್ಣ ಸಣ್ಣ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆಯರು ಕೂಡ ಅಧಿಕಾರಿಗಳ ಎಚ್ಚರಿಕೆಗೆ ಕವಡೆ ಕಿಮ್ಮತ್ತು ಕೂಡ ನೀಡದೆ ರೈಲು ಹಳಿಯ ಮೇಲೆ ನಿಂತೇ ಛಾತ್ ಪೂಜೆಯಲ್ಲಿ ಭಾಗಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.