ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ “ಗಾಳಿಪಟ-2′ ಚಿತ್ರದ ಘೋಷಣೆ ಹೊರಬಿದ್ದು ತಿಂಗಳುಗಳೇ ಕಳೆದಿವೆ. ಆದರೆ ಚಿತ್ರ ಮಾತ್ರ ಅದೇಕೋ ಮುಂದಕ್ಕೆ ಹೋಗುತ್ತಿಲ್ಲ. ಹಾಗಾದ್ರೆ, ಭಟ್ಟರ “ಗಾಳಿಪಟ-2′ ಗಾಂಧಿನಗರದಲ್ಲಿ ಹಾರಾಡೋದು ಯಾವಾಗ? ಮೊದಲು ಅನೌನ್ಸ್ ಮಾಡಿದ ಟೀಮ್‌ಗೆ ಭಟ್ಟರು ಮೇಜರ್ ಸರ್ಜರಿ ಮಾಡಿದ್ದು ಯಾಕೆ? ಚಿತ್ರದ ನಿರ್ಮಾಪಕರು ಯಾಕೆ ಬದಲಾದರು? ಹೀಗೆ “ಗಾಳಿಪಟ-2′ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಎದ್ದಿರುವ ಪ್ರಶ್ನೆಗಳು, ಹರಿದಾಡುತ್ತಿರುವ ಅಂತೆ-ಕಂತೆಗಳು ಅನೇಕ. ಇದೇ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಭಟ್ಟರು “ಗಾಳಿಪಟ-2′ ಹಿಂದಿನ ಒಂದಷ್ಟು ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
“ಆರಂಭದಲ್ಲಿ ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿರಬೇಕಿತ್ತು. ಆದ್ರೆ ನಂತರ ಸಿನಿಮಾದಲ್ಲಿ ಕೆಲವೊಂದು ಮುಖ್ಯ ಬದಲಾವಣೆಗಳನ್ನು ಮಾಡಬೇಕಾಯ್ತು. ಶರಣ್, ರಿಷಿ, ಅದಿತಿ, ಸೋನಾಲ್ ಮಾಂತೇರೊ ಹೀಗೆ ಹಲವರು ಬದಲಾದರು. ಅವರ ಜಾಗಕ್ಕೆ ಹೊಸಬರು ಬಂದ್ರು. ಹಾಗಾಗಿ ಚಿತ್ರದ ಸ್ಕ್ರಿಪ್ಟ್ನಲ್ಲೂ ಕೆಲವೊಂದು ಬದಲಾವಣೆ ಮಾಡಬೇಕಾಯ್ತು. ಹಳೆಯ ಸ್ಕ್ರಿಪ್ಟ್ನಲ್ಲಿ ಶರಣ್ ಧಾರವಾಡಿಯಾಗಿ ಅಭಿನಯಿಸಬೇಕಿತ್ತು. ಆದ್ರೆ ಬದಲಾದ ಸ್ಕ್ರಿಪ್ಟ್ನಲ್ಲಿ ಗಣೇಶ್ ಬೆಂಗಳೂರು ಹುಡುನ ಥರ ಕಾಣಿಸುತ್ತಿದ್ದಾರೆ. ಹೀಗೆ ಸ್ಕ್ರಿಪ್ಟ್ನಲ್ಲಿ ಒಂದಷ್ಟು ಸಣ್ಣ-ಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಾಯ್ತು. ಇನ್ನು ಹಳೆಯ ನಿರ್ಮಾಪಕರು ಕೂಡ ಬದಲಾದ್ರು. ಹೊಸ ನಿರ್ಮಾಪಕರಾಗಿ ಎಂ. ರಮೇಶ್ ರೆಡ್ಡಿ ತಂಡವನ್ನು ಸೇರಿಕೊಂಡಿದ್ದಾರೆ’ ಎನ್ನುತ್ತಾರೆ ಭಟ್ಟರು.
ಎಲ್ಲಾದಕ್ಕೂ ಸೂಕ್ತ ಕಾರಣವಿದೆ…: ಇನ್ನು ಭಟ್ಟರು ಹೇಳುವಂತೆ, “ಗಾಳಿಪಟ-2′ ಚಿತ್ರದ ಎಲ್ಲಾ ಮೇಜರ್ ಸರ್ಜರಿಗಳಿಗೂ ಬಲವಾದ ಕಾರಣವಿದೆಯಂತೆ. “ಸೂಕ್ತ ಕಾರಣ ಇಟ್ಟುಕೊಂಡು ಸರ್ವಾನುಮತದಿಂದ ಈ ಬದಲಾವಣೆ ಮಾಡಲಾಗಿದೆ. ನಿರ್ಮಾಪಕರು ಏಕಕಾಲಕ್ಕೆ ಎರಡೆರಡು ಸಿನಿಮಾಗಳನ್ನು ಮಾಡಬೇಕಾಗಿದ್ದರಿಂದ ಈ ಸಿನಿಮಾ ಬಿಡಬೇಕಾಯ್ತು. ಇನ್ನು ಅದಿತಿ, ಸೋನಾಲ್ ಮತ್ತಿತರರು ಡೇಟ್ಸ್ ಸಮಸ್ಯೆಯಿಂದ ಹೊರಗುಳಿದರು. ಸದ್ಯ ಗಣೇಶ್ ಅವರಿಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ, ದಿಗಂತ್‌ಗೆ ನಾಯಕಿಯಾಗಿ ಸಂಯುಕ್ತಾ ಮೆನನ್, ಪವನ್ ಕುಮಾರ್‌ಗೆ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಜೋಡಿಯಾಗಿದ್ದಾರೆ.
ಉಳಿದಂತೆ ಅನಂತನಾಗ್ ಮೇಷ್ಟ್ರು ಪಾತ್ರ ಮಾಡುತ್ತಿದ್ದಾರೆ. ರಂಗಾಯಣ ರಘು ಇನ್ನೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ರಾಜೇಶ್ ಕೃಷ್ಣನ್, ನೀತೂ, ನಿಶ್ವಿಕಾ ನಾಯ್ಡು ಅವರನ್ನು ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ. ಉಳಿದಂತೆ ಇತರೆ ಕಲಾವಿದರ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಕೊಡುತ್ತೇವೆ. ಇನ್ನು ಶೂಟಿಂಗ್‌ಗೆ ಹೋಗೋಣ ಅಂದ್ರೆ, ನಾವು ಶೂಟಿಂಗ್ ಮಾಡಬೇಕಾದ ಮಡಿಕೇರಿ, ಕುದುರೆಮುಖ, ಜೋಗ ಎಲ್ಲಾ ಕಡೆಯೂ ವಿಪರೀತ ಮಳೆ. ಮತ್ತೂಂದು ಕಡೆ ನೆರೆ-ಪ್ರವಾಹ. ಹೀಗಿರುವಾಗ ಶೂಟಿಂಗ್ ಮಾಡೋದಕ್ಕೆ ಹೇಗೆ ಸಾಧ್ಯ?’ ಎನ್ನುತ್ತಾರೆ.
ಹೊಸ ಟೀಮ್ ಬಗ್ಗೆ ಭಟ್ಟರು ಏನಂತಾರೆ?: ಇನ್ನು “ಗಾಳಿಪಟ-2′ ಚಿತ್ರದಲ್ಲಿ ಯೋಗರಾಜ್ ಭಟ್ಟರ ತೆರೆ ಹಿಂದಿನ ತಂಡ ಕೂಡ ಬದಲಾಗಿದೆ. ಭಟ್ಟರ ಚಿತ್ರಗಳಿಗೆ ಇಲ್ಲಿಯವರೆಗೆ ಸಂಗೀತ ನೀಡುತ್ತಿದ್ದ ಮನೋಮೂರ್ತಿ, ವಿ. ಹರಿಕೃಷ್ಣ ಬದಲಿಗೆ ಈ ಬಾರಿ ಅರ್ಜುನ್ ಜನ್ಯ ಭಟ್ಟರ ಟೀಮ್ ಸೇರಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣವಿದೆ. ಹೊಸ ತಂತ್ರಜ್ಞರ ತಂಡದ ಬಗ್ಗೆ ಮಾತನಾಡುವ ಭಟ್ಟರು, “ಈ ಚಿತ್ರದ ಮ್ಯೂಸಿಕ್ ಕಂಪೋಸಿಂಗ್ ವೇಳೆ ಹರಿಕೃಷ್ಣ “ಯಜಮಾನ’ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಆ ಜಾಗಕ್ಕೆ ಅರ್ಜುನ್ ಜನ್ಯ ಬಂದ್ರು.
ಇಲ್ಲಿಯವರೆಗೆ ನನ್ನ ಅರ್ಜುನ್ ಜನ್ಯ ಕಂಬಿನೇಶನ್ ಹಾಡುಗಳು ಹಿಟ್ ಆಗಿದ್ದವು. ಕೊಂಚ ಬದಲಾವಣೆ ಇರಲಿ ಅಂತ ಹೀಗೆ ಮಾಡಿಕೊಂಡಿದ್ದೇವೆ. ಆದರೆ ಇದೆಲ್ಲವೂ ಸ್ನೇಹದಲ್ಲಿ ಆಗಿದೆ’ ಎನ್ನುತ್ತಾರೆ. ಇನ್ನು ಚಿತ್ರದ ಮೊದಲಾರ್ಧ ಕರ್ನಾಟಕದಲ್ಲಿ ನಡೆದರೆ, ದ್ವಿತಿಯರ್ಧ ಕೆನಡಾ, ಈಸ್ಟ್ ಅಮೆರಿಕಾ ಸೇರಿದಂತೆ ವಿದೇಶದ ಪ್ರಮುಖ ಹೀಮ ಬೀಳುವ ಪ್ರದೇಶಗಳಲ್ಲಿ ನಡೆಯಲಿದೆಯಂತೆ. ಜೊತೆಗೆ ಈ ಚಿತ್ರ ಪ್ರೊಡಕ್ಷನ್‌ಗೆ ಹೆಚ್ಚು ಟೈಮ್ ತಗೊಳ್ಳೊತ್ತೆ ಹಾಗಾಗಿ ಮುಂದಿನ ಆಗಸ್ಟ್ ವೇಳೆಗೆ ತೆರೆಗೆ ಬರಬಹುದು ಎನ್ನುತ್ತಾರೆ ಭಟ್ಟರು.