ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿದ್ದ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ(50) ನಿರಂಜನ್ ಭಟ್ (27)ಮತ್ತು ನವನೀತ್ ಶೆಟ್ಟಿ (21) ಅವರನ್ನು ಭದ್ರತಾ ಕಾರಣಿಗಳಿಗಾಗಿ ಶುಕ್ರವಾರ ಶಿವಮೊಗ್ಗದ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಸೋಮವಾರ ಸಹಕೈದಿಗಳಿಂದ ಹಲ್ಲೆಗೊಳಗಾಗಿದ್ದ ಗಾಯಗೊಂಡ ನಿರಂಜನ್ ಭಟ್ ಮತ್ತು ನವನೀತ್ ಶೆಟ್ಟಿ ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಿರಂಜನ ಭಟ್ ಮತ್ತು ನವನೀತ್ ಶೆಟ್ಟಿ ಅವರು ಕಾರಾಗೃಹದ ಬಿ ಬ್ಲಾಕ್‌ನ 1 ನೇ ಮಹಡಿಯ 5 ನೇ ಕೊಠಡಿಯಲ್ಲಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ತಮ್ಮ ಕೇಸಿನ ಬಗ್ಗೆ ವಿಚಾರಿಸಲು ಮೇಲಿನಿಂದ ಮೆಟ್ಟಲುಗಳನ್ನು ಇಳಿದು ಕೆಳಗಿರುವ ಜೈಲು ಅಧೀಕ್ಷಕರ ಕಚೇರಿ ಕಡೆಗೆ ಬರುತ್ತಿದ್ದಾಗ ಮೆಟ್ಟಲುಗಳಲ್ಲಿಯೇ ತಂಡವೊಂದು ತಡೆದು ಹಲ್ಲೆ ನಡೆಸಿತ್ತು.
ನಿರಂಜನ ಭಟ್ ಮತ್ತು ನವನೀತ್ ಶೆಟ್ಟಿ ಅವರು ಕೂಡಾ ಪ್ರಾರಂಭದ ಕೆಲವು ದಿನ ಮಾತ್ರ ಉಡುಪಿಯ ಜೈಲಿನಲ್ಲಿದ್ದು, ಆ ಬಳಿಕ ರಾಜೇಶ್ವರಿ ಅವರು ಮಂಗಳೂರಿನಲ್ಲಿ ಇರುವುದರಿಂದ ನ್ಯಾಯಾಲಯದ ವಿಚಾರಣೆಗೆ ಕರೆದೊಯ್ಯಲು ಅನುಕೂಲವಾಗಲೆಂದು ಅವರನ್ನು ಕೂಡಾ ಮಂಗಳೂರು ಜೈಲಿಗೆ ವರ್ಗಾಯಿಸಲಾಗಿತ್ತು.
ಹಾಗೆ ಕಳೆದ ಸುಮಾರು ಒಂದು ವರ್ಷದಿಂದ ನಿರಂಜನ ಭಟ್ ಮತ್ತು ನವನೀತ್ ಶೆಟ್ಟಿ ಅವರೂ ಮಂಗಳೂರಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ಮಂಗಳೂರು ಜೈಲಿನಲ್ಲಿದ್ದ ಹಲ್ಲೆ ನಡೆಸಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿಯ ಹಿರಿಯಡಕದಲ್ಲಿ ಇರುವ ಸಬ್ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ಇರಿಸಲು ಪ್ರತ್ಯೇಕ ಸೆಲ್ ಇಲ್ಲದ ಕಾರಣ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ರಾಜೇಶ್ವರಿ ಅವರನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.