Advertisement

ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ

03:16 PM Sep 17, 2021 | Team Udayavani |

ಬೆಂಗಳೂರು: ರೈಲ್ವೆ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ತಮ್ಮ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಈ ಅಚ್ಚರಿ ನಿರ್ಧಾರ ಕುರಿತು “ಉದಯವಾಣಿ’ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದರು.

Advertisement

ದಿಢೀರ್‌ ಸ್ವಯಂ ನಿವೃತ್ತಿಗೆ
ಕಾರಣ ಏನು?
ಏಕಾಏಕಿ ಸ್ವಯಂ ನಿವೃತ್ತಿ ನೀಡಿಲ್ಲ. ಒಂದೆರಡು ವರ್ಷಗಳ ಕೆಲವೊಂದು ಘಟನಾವಳಿಗಳು ಈ ನಿರ್ಧಾರಕ್ಕೆ ಕಾರಣವಾಗಿರಬಹುದು. ಅಲ್ಲದೆ, ಕಳೆದ 8-10 ತಿಂಗಳ ಈ ಬಗ್ಗೆ ನಿರ್ಧರಿಸಿದ್ದೆ.ಇದೀಗ ಸರ್ಕಾರ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ವೈಯಕ್ತಿಕ ಕಾರಣಕ್ಕೆ ಸ್ವಯಂ ನಿವೃತ್ತಿ ನೀಡುತ್ತಿದ್ದು, ಅದನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದೇನೆ.

ಪೊಲೀಸ್‌ ಇಲಾಖೆಯಲ್ಲಿನ ಸೇವೆ
ತೃಪ್ತಿ ತಂದಿದೆಯೇ?
ಮೂರು ದಶಕಗಳ ಕಾಲ ರಾಜ್ಯ ಪೊಲೀಸ್‌ ಇಲಾಖೆಯಲ್ಲಿನ ಸೇವೆ ಅತ್ಯಂತ ತೃಪ್ತಿ ತಂದಿದೆ. ಇದೊಂದು ಅಪ್ರತಿಮ ಇಲಾಖೆ. ಇಂತಹ ಶಿಸ್ತಿನ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಪುಣ್ಯ. ಮತ್ತೊಂದು ಜನ್ಮ ಎಂಬುದು ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ ಸಲ್ಲಿಸಲು ಬಯಸುತ್ತೇನೆ. ತಾನು ಸೇವೆ ಸಲ್ಲಿಸಿದ್ದ ಪ್ರತಿಯೊಂದು ವಿಭಾಗದಲ್ಲಿಯೂ ಹೊಸ ಬದಲಾವಣೆ ತಂದಿದ್ದೇವೆ ಎಂಬ ಆತ್ಮ ತೃಪ್ತಿ ನನಗೆ ಇದೆ.

ಭಾಸ್ಕರ್‌ ರಾವ್‌ ಅವರ ರಾಜಕೀಯ
ಪ್ರವೇಶ ಯಾವಾಗ?
ರಾಜಕೀಯ ನಿರ್ಧಾರದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು, ಮುಂದಿನ ದಿನಗಳಲ್ಲಿ ನೋಡೋಣ. ಯಾವುದೇ ರಾಜಕೀಯ ಪಕ್ಷದ ಮುಖಂಡರ ಜತೆಯೂ ಚರ್ಚಿಸಿಲ್ಲ.

ಭಾಸ್ಕರ್‌ರಾವ್‌ ಅವರ ಮುಂದಿನ ನಡೆ ಏನು?
ಮುಂದಿನ ನಡೆ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪ್ರಪಂಚ ವಿಶಾಲವಾಗಿದೆ. ಗಗನದಷ್ಟು ಅವಕಾಶಗಳಿವೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿ ಕೊಂಡರೆ ಯಶಸ್ಸು ಸಾಧ್ಯವಿದೆ.

Advertisement

ಬಸವನ ಗುಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ನಿಜವೇ? ರಾಜ್ಯಸಭಾ ಅಥವಾ ವಿಧಾನಪರಿಷತ್‌ ಸ್ಥಾನದ ಆಕಾಂಕ್ಷಿ ನಿಜವೇ?

ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವಾಗ ಬಸವನ ಗುಡಿ ಕ್ಷೇತ್ರಕ್ಕೆ ಸೀಮಿತವಾಗಿ ಮಾಡಿಲ್ಲ. ಕೇವಲ ಬಸವನಗುಡಿ ಕ್ಷೇತ್ರಕ್ಕೆ ಸೇರಿದವನಲ್ಲ. ಇಡೀ ಕರ್ನಾಟಕಕ್ಕೆ ಸೇರಿದವನು. ಅಲ್ಲದೆ, ಯಾವುದೇ ರಾಜಕೀಯ ಮುಖಂಡರನ್ನು ಭೇಟಿಯಾಗಿ ರಾಜ್ಯಸಭಾ ಅಥವಾ ವಿಧಾನಪರಿಷತ್‌ ಸ್ಥಾನ ಕೊಡಿಸುವಂತೆ ಕೇಳಿಲ್ಲ. ಅದಕ್ಕೆ ಸಿದ್ಧತೆ ಕೂಡ ಮಾಡಿ ಕೊಂಡಿಲ್ಲ

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next