ಮಂಗಳೂರು: ತುಳು ಭಾಷೆಯ ಏಳಿಗೆಗೆ ನೀಡಿದ ಕೊಡುಗೆ ಪರಿಗಣಿಸಿ ತುಳು ವಿದ್ವಾಂಸ ಮತ್ತು ದಕ್ಷಿಣ ಕನ್ನಡ ಮೂಲದ ಹಿರಿಯ ಸಾಹಿತಿ ಡಾ| ಅಮೃತ ಸೋಮೇಶ್ವರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ “ಭಾಷಾ ಸಮ್ಮಾನ್’ ಪ್ರಶಸ್ತಿ ದೊರೆತಿದೆ.
ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಹೊಂದಿದೆ. ಡಾ| ಚಿನ್ನಪ್ಪ ಗೌಡ, ಪ್ರೊ| ಚಂದ್ರಕಲಾ ನಂದಾವರ್ ಮತ್ತು ಜಾನಕಿ ಬ್ರಹ್ಮಾವರ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ| ಅಮೃತ ಸೋಮೇಶ್ವರ ಅವರ ಹೆಸರನ್ನು ಆಯ್ಕೆ ಮಾಡಿದೆ.
1935ರಲ್ಲಿ ಜನಿಸಿರುವ ಡಾ| ಸೋಮೇಶ್ವರ ಅವರು, ತುಳು ಭಾಷೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜತೆಗೆ ತನ್ನ ಕೆಲವು ತುಳು ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. “ಪಡ್ತಾನಾಸ’ ಮತ್ತು “ಭಮಕುಮಾರ ಸಂಧಿ’ ಕನ್ನಡಕ್ಕೆ ಅನು ವಾದ ವಾಗಿರುವ ಇವರ ಪ್ರಮುಖ ಕೃತಿಗಳು.
ಸೋಮೇಶ್ವರ ಅವರು “ತಂಬಿಲಾ’ ಮತ್ತು “ರಂಗಿತಾ’ ಕಾವ್ಯ ಸಂಕಲನಗಳನ್ನು, ಏಳು ತುಳು ನಾಟಕಗಳನ್ನು ಕೂಡ ರಚನೆ ಮಾಡಿದ್ದಾರೆ. ಡಾ| ಸೋಮೇಶ್ವರ ಅವರಿಗೆ ಈಗಾಗಲೇ ತುಳು ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ, ಟಿ. ಕನಕ ಅನ್ನಯ್ಯ ಶೆಟ್ಟಿ ಸಹಿತ ಅನೇಕ ಪ್ರಶಸ್ತಿಗಳು ಸಂದಿವೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಡಾ| ಸೋಮೇಶ್ವರ ಅವರ ಜತೆ ಪ್ರೊ| ಮಧುಕರ್ ಅನಂತ್ ಮೆಹಂದಳೆ ಅವರನ್ನು ಶಾಸ್ತಿÅàಯ ಮತ್ತು ಮಧ್ಯಯುಗೀನ ಸಾಹಿತ್ಯ ವಿಭಾಗ ದಲ್ಲಿ 2016ನೇ ಸಾಲಿನ ಭಾಷಾ ಸಮ್ಮಾನ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾ ಡೆಮಿಯ ಪ್ರಕಟನೆ ತಿಳಿಸಿದೆ.