ನವದೆಹಲಿ: ಭಾರ್ತಿ ಏರ್‌ಟೆಲ್ ಟೆಲಿನಾರ್ ಇಂಡಿಯಾ ಕಂಪನಿಯನ್ನು ಖರೀದಿಸಿದೆ. ರಿಲಯನ್ಸ್‌ನ ಜಿಯೋ ಮೊಬೈಲ್ ಸೇವೆ ಜನಪ್ರಿಯಗೊಳ್ಳುತ್ತಿರುವಂತೆಯೇ ಈ ಖರೀದಿ ಘೋಷಣೆಯಾಗಿದೆ. ಟೆಲಿನಾರ್ ಇಂಡಿಯಾ ತರಂಗಾಂತರವನ್ನು ಹೊಂದಿರುವ ಎಲ್ಲ 7 ವಲಯಗಳೂ ಇದೀಗ ಭಾರ್ತಿ ಏರ್‌ಟೆಲ್ ಪಾಲಾಗಲಿದೆ. ಆದರೆ, ಎಷ್ಟು ಮೊತ್ತಕ್ಕೆ ಈ ವಹಿವಾಟು ನಡೆದಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಟೆಲಿನಾರ್(ಇಂಡಿಯಾ) ಕಮ್ಯೂನಿಕೇಷನ್ಸ್ ಪ್ರೈ. ಲಿ. ಖರೀದಿಗೆ ಟೆಲಿನಾರ್ ಸೌತ್ ಏಷ್ಯಾ ಪ್ರೈ..ಲಿ. ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 12 ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ. ಅದರಂತೆ, ಟೆಲಿನಾರ್‌ನ ಸ್ಪೆಕ್ಟ್ರಂ, ಲೈಸನ್ಸ್‌ಗಳು, ಅದರ ಉದ್ಯೋಗಿಗಳು ಹಾಗೂ 4.40 ಕೋಟಿ ಗ್ರಾಹಕರೂ ಭಾರ್ತಿ ಏರ್‌ಟೆಲ್ ಪಾಲಾಗಲಿದ್ದಾರೆ. ವೊಡಾಫೋನ್ ಮತ್ತು ಐಡಿಯಾ ವಿಲೀನಗೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. 2007ರಲ್ಲಿ ಹಚ್ ಮೊಬೈಲ್‌ಕಂಪನಿಯನ್ನು ವೊಡಾಫೋನ್ ಇಂಡಿಯಾ ಖರೀದಿ ಮಾಡಿತ್ತು.