ಶಾಲೆಯ ಎದುರು ಕುಳಿತಿರುವ ಹಣ್ಣು ಹಣ್ಣು ಮುದುಕಿಯ ಎದುರು ಹಣ್ಣಿನ ರಾಶಿಯಿತ್ತು. ಅದುರುವ ಕೈ-ಕುತ್ತಿಗೆಯ ಜೊತೆಗೇ ಆಕೆ ವ್ಯಾಪಾರಕ್ಕೆ ಕುಳಿತಿದ್ದಳು. ಈ ವಯಸ್ಸಿನಲ್ಲಿ ದುಡಿಯಬೇಕೇ ಅಂತ ಕೇಳಿದರೆ, ನಗುತ್ತಲೇ ಮಾತಿಗಿಳಿದರು…
ಕೆಲವರು, ನಾನು ದುಡಿದೇ ಉಣ್ಣುತ್ತೇನೆ ಎಂದು ಹಠಕ್ಕೆ ಬೀಳುತ್ತಾರೆ. ಮೈಯಲ್ಲಿ ಕಸುವು ಇರುವವರೆಗೂ ಕಾಯಕವೇ ದೇವರು ಅಂತ ನಂಬಿಕೊಂಡಿರುತ್ತಾರೆ, ಅಂಥವರಲ್ಲಿ ಹಣ್ಣು ಮಾರುವ ಶಾಂತವ್ವರೂ ಒಬ್ಬರು.
ರಾಮದುರ್ಗದ ಮಡ್ಡಿಗಲ್ಲಿಯ 75 ವರ್ಷದ ಶಾಂತವ್ವ ಭಜಂತ್ರಿಗೆ ಮೂವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣುಮಗಳಿದ್ದಾರೆ. ಎಲ್ಲರೂ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಅಜ್ಜಿ ಮಾತ್ರ, ನಿತ್ಯವೂ ಬಾರೆಹಣ್ಣು ಮಾರಲು, ಮಹಾಂತೇಶ ನಗರದ ಬಸವೇಶ್ವರ ಸ್ಕೂಲ್ ಬಳಿ ಬಂದು ಕೂರುತ್ತಾರೆ. ಸಣ್ಣಗೆ ಅದುರುವು ಗೋಣು, ಕೈಗಳು ಆಕೆಯ ಜೀವನಪ್ರೀತಿಯನ್ನು, ದುಡಿಯುವ ಛಲವನ್ನು ಕುಗ್ಗಿಸಿಲ್ಲ. ಯಾಕಜ್ಜೀ, ಈ ವಯಸ್ಸಿನಾಗ ವ್ಯಾಪಾರ ಅಂತ ಕೇಳಿದರೆ, “ಮನ್ಯಾಗಿ ಕುಂತ್ರ ಹೊತ್ತು ಹೋಗೋದಿಲ್ಲೋ ನನ್ನಪ್ಪ. ಹಣ್ಣು ಮಾರಾಟದಿಂದ ನನ್ನ ಜೀವನ ಸವಸೇನ್ರಿ. ಎಲ್ಲ ಮಕ್ಕಳನ್ನು ಓದಿಸಿ ಮದುವೆ ಮಾಡೇನ್ರಿ. ಈಗ ಅವರೆಲ್ಲ ಬ್ಯಾಡ ಅಂತಾರ್ರಿ… ಆದ್ರ, ನನಗೆ ಖಾಲಿ ಕುಂಡ್ರಾಕ ಆಗೋದಿಲ್ಲ, ಹಿಂಗಾಗಿ ಹಣ್ಣ ಮಾರತೇನ್ರೀ. ಸ್ವಲ್ಪ ದುಡ್ಡು ಬರತಾವ್ರಿ, ಹಂಗ ಶಾಲೆ ಮಕ್ಕಳ ಜೊತೆ ಟೈಮ್ ಕಳೆದದ್ದು ಗೊತ್ತಗೋದಿಲ್ರಿ. ಹಿಂಗಾಗಿ ಆರಾಮದೇನ್ರಿ…’ ಅಂತ ನಗುತ್ತಾರೆ.
ಒಂದು ಕೆ.ಜಿ.ಗೆ 20 ರೂ.
ಬಾರೇ ಹಣ್ಣುಗಳನ್ನು ತೊರಗಲ್‌ದಿಂದ ಪ್ರತಿ ಕಿಲೋಗೆ ರೂ.20 ರಂತೆ ಖರೀದಿಸುತ್ತಾರೆ ಶಾಂತವ್ವ. ಅವುಗಳನ್ನು ಶಾಲಾ ಮಕ್ಕಳಿಗೆ ಮಾರಿ, ದಿನಾಲು 80-100 ರೂ. ಆದಾಯ ಗಳಿಸುತ್ತಿದ್ದಾರೆ. ಮೊಮ್ಮಕ್ಕಳು ತಂದು ಕೊಡುವ ಊಟದ ಡಬ್ಬಿ ತಿಂದು, ಸಂಜೆಯವರೆಗೂ ಶಾಲೆಯ ಬಳಿಯೇ ಕುಳಿತಿರುತ್ತಾರೆ. ಸಂಜೆ ಮೊಮ್ಮಗ ಬಂದು ವಾಪಸ್ ಕರಕೊಂಡು ಹೊಗುತ್ತಾನೆ.
ಈ ಇಳಿ ವಯಸ್ಸಿನಲ್ಲಿಯೂ ಯಾವುದೇ ಖಾಯಿಲೆ, ಔಷಧಿಗಳು ಅಜ್ಜಿಯ ಹತ್ತಿರ ಸುಳಿದಿಲ್ಲದಿರುವುದಕ್ಕೆ, ಈಕೆಯ ಕಾಯಕ ನಿಷ್ಠೆಯೇ ಕಾರಣವಿರಬಹುದು. ಅರವತ್ತಾಯಿತು, ಆಯಾಸ, ಬೇಸರ ಎನ್ನುವವರ ಮಧ್ಯೆ, ಶಾಂತವ್ವರನ್ನು “ಭಲೇ ಅಜ್ಜಿ’ ಎನ್ನಲು ಅಡ್ಡಿಯಿಲ್ಲ.
-ಸುರೇಶ ಗುದಗನವರ