Advertisement
ನಗರದ ಮುನ್ಸಿಪಲ್ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಉದ್ದೇಶದಿಂದಲೇ ಇಲ್ಲಿ ಯಾತ್ರೆ ಆಯೋಜಿಸಿದೆ ಎಂಬ ಮಾತುಗಳು ಕೇಳಿಬಂದವು.
Related Articles
Advertisement
ಮುಂದಿನ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ಉದ್ದೇಶದಿಂದ ಪಾದಯಾತ್ರೆ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ ಇದು ಚುನಾವಣಾ ಪೂರ್ವ ತಯಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಬಳ್ಳಾರಿ ಪಾದಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಹೀಗಾಗಿ ಬಳ್ಳಾರಿ ನೆಲ ಕಾಂಗ್ರೆಸ್ ಪಾಲಿಗೆ ಅದೃಷ್ಟ ತಂದುಕೊಡುವ ಸ್ಥಳ ಎಂಬ ನಂಬಿಕೆಯಿಂದಲೇ ಜೋಡೋ ಯಾತ್ರೆಯ ಸಮಾವೇಶವನ್ನೂ ಇಲ್ಲಿಯೇ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಸಮಾವೇಶದಲ್ಲಿ ಭಾಷಣ ಮಾಡಿದ ಕಾಂಗ್ರೆಸ್‌ನ ಕೇಂದ್ರ-ರಾಜ್ಯ ಮುಖಂಡರೆಲ್ಲರೂ ರಾಹುಲ್ ಗಾಂಧಿಯವರು ಚುನಾವಣೆ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ ಎಂದು ಸಮಜಾಯಿಷಿ ಕೊಡುವ ಯತ್ನ ಮಾಡಿದರು. ಆದರೆ ಮಾತು ಮಾತಿಗೂ ಕೇಂದ್ರ-ರಾಜ್ಯ ಸರಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕು. ಕಾಂಗ್ರೆಸ್ ಬೆಂಬಲಿಸಬೇಕು ಎನ್ನುತ್ತ ಚುನಾವಣಾ ಪ್ರಚಾರ ಮಾಡಿದ್ದು ಯಾತ್ರೆಯ ಉದ್ದೇಶ ಏನು ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದಂತಿತ್ತು.
ಸಿದ್ದು ಟಾರ್ಗೆಟ್ ಶ್ರೀರಾಮುಲು?
ಬಳ್ಳಾರಿ ಭಾಗದ ಪ್ರಬಲ ನಾಯಕ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಸಿದ್ದರಾಮಯ್ಯ ಈ ಕಹಿಯನ್ನು ಮರೆತಂತೆ ಕಾಣುತ್ತಿಲ್ಲ. ಕಳೆದ ಚುನಾವಣೆ ಬಳಿಕ ಈವರೆಗೂ ಆಗಾಗ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈಗ ಮತ್ತೆ ಚುನಾವಣೆ ಹತ್ತಿರವಾಗುತ್ತಿದ್ದು, ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ ಎನ್ನಲಾಗಿದೆ. ಭಾರತ್ ಜೋಡೋ ಸಮಾವೇಶದಲ್ಲಿ ಕೂಡಾ ಸಿದ್ದರಾಮಯ್ಯ ಭಾಷಣದಲ್ಲಿ ಶ್ರೀರಾಮುಲು ವಿರುದ್ಧ ಮುಗಿಬಿದ್ದರು. ಬಳ್ಳಾರಿಗೆ ನಿಮ್ಮ ಕೊಡುಗೆ ಏನಿದೆ. ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಇತಿಹಾಸ ಗೊತ್ತಿಲ್ಲ ನಿನಗೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ಬಾರಿಯೂ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ನಡುವೆ ಚುನಾವಣಾ ಹೋರಾಟ ಕದನ ಕೌತುಕವಾಗಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಸಂಗನಕಲ್ಲು ಹೊರವಲಯದಲ್ಲಿ ರಾಹುಲ್ ವಾಸ್ತವ್ಯ
ಬಳ್ಳಾರಿ: ಕಳೆದ ಎರಡು ದಿನಗಳಿಂದ ನಗರದಲ್ಲಿ ಪಾದಯಾತ್ರೆ ಕೈಗೊಂಡು ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಯವರು ಸಭೆಯ ಬಳಿಕ ನೇರವಾಗಿ ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿ ವ್ಯವಸ್ಥೆ ಮಾಡಿರುವ ಕ್ಯಾಂಪ್‌ನಲ್ಲಿ ಶನಿವಾರ ರಾತ್ರಿ ತಂಗಿದ್ದಾರೆ. ಭಾನುವಾರ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಮುಂದುವರಿಯಲಿದ್ದು, ಬೆಳಗ್ಗೆ 11 ಗಂಟೆಗೆ ಮೋಕಾ ಬಳಿ ಉಪಾಹಾರ ಸೇವಿಸಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸಂಜೆ ನಾಲ್ಕು ಗಂಟೆಗೆ ಪುನಃ ಪಾದಯಾತ್ರೆ ಮೂಲಕ ತೆರಳಿ ನೆರೆಯ ಆಂಧ್ರದ ಚತ್ರಗುಡಿ ಮೂಲಕ ಆಂಧ್ರಪ್ರದೇಶಕ್ಕೆ ಪ್ರವೇಶಿಸಲಿದ್ದಾರೆ. ಅ. 16ರಂದು ರಾತ್ರಿ ಚತ್ರಗುಡಿ ಆಂಜನೇಯ ದೇವಸ್ಥಾನ ಬಳಿ ವಾಸ್ತವ್ಯ ಹೂಡಲಿದ್ದಾರೆ. ಅ. 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಪಾದಯಾತ್ರೆಗೆ ಬ್ರೇಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ತಿಪ್ಪೇಸ್ವಾಮಿ ನಾಕೀಕೆರೆ