ಭಾರತೀನಗರ: ಆಧುನಿಕತೆ ಬೆಳೆದಂತೆ ಪರಿಸರ ಕ್ಷೀಣಿಸುತ್ತಿರುವುದು ಮುಂದಿನ ದಿನಗಳ ಅಪಾಯ ಮುನ್ಸೂಚನೆ. ಇಂದಿನ ದಿನಗಳಲ್ಲಿ ಅರಣ್ಯ ಮತ್ತು ಪರಿಸರ ಕಾಳಜಿ ಎಂಬುವುದು ಕೇವಲ ಭಾಷಣ, ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ಮಾತ್ರ ಕಾಣಬಹುದು. ಇಂತಹ ಸಂದರ್ಭದಲ್ಲಿ ಒಂದಷ್ಟು ಜಾಗೃತ ಮನಸ್ಸುಗಳು ಪರಿಸರ ವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.
ಆದರೆ, ದೇಶದ ಯುವಶಕ್ತಿ ಪರಿಸರದೆಡೆಗೆ ಆಸಕ್ತಿ ವಹಿಸದಿರುವುದು ವಿಷಾದ. ಇಂತಹ ಸನ್ನಿವೇಶದಲ್ಲಿ ಅನಕ್ಷರಸ್ತ ವೃದ್ಧರೊಬ್ಬರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಗಿಡಮರ ಬೆಳೆಸುತ್ತಿರುವುದು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ.
ಮಣಿಗೆರೆಯ 90 ವರ್ಷದ ನಿಂಗೇಗೌಡರು ಕೆರೆ ಏರಿಯ ಬಳಿ ಏರಿಬೊಮ್ಮಲಿಂಗೇಶ್ವರ ದೇವಾಲಯ ನಿರ್ಮಿಸಿ, ಅದರ ಸುತ್ತ-ಮುತ್ತ ಅರಳಿ, ಬನ್ನಿ ಮುಂತಾದ ಮರ, ದೇವರ ಪೂಜಾಕಾರ್ಯಕ್ಕೆ ಉಪಯುಕ್ತ ವಾಗುವ ಅನೇಕ ಹೂವು, ಬಾಳೆ ಗಿಡ ಬೆಳೆಸಿದ್ದಾರೆ. ಸುಮಾರು 25 ವರ್ಷಗಳಿಂದ ಪರಿಸರಕ್ಕಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ನಿಂಗೇಗೌಡರು ಮಣಿಗೆರೆಯಲ್ಲೂ ಪಟ್ಟಲದಮ್ಮನ ಗುಡಿ ನಿರ್ಮಿಸಿ ಆ ದೇಗುಲದ ಸುತ್ತಮುತ್ತ ಸುಮಾರು 250ಕ್ಕೂ ಹೆಚ್ಚು ಗಿಡಮರ ಬೆಳೆಸಿ ಈಗಲೂ ನೀರುಣಿಸುತ್ತಿದ್ದಾರೆ.
ತಮ್ಮ ವಯೋಸಹಜ ನಿಶಕ್ತಿ ಲೆಕ್ಕಿಸದೆ ಗಿಡಮರಗಳನ್ನು ಮಕ್ಕಳಂತೆ ಪ್ರೀತಿಸಿ ಪೊರೆಯುತ್ತಿರುವ ನಿಂಗೇಗೌಡರ ಮುಖದಲ್ಲಿ ಸಾರ್ಥಕ ಭಾವ ಕಂಡು ಬರುತ್ತದೆ. ಇದಲ್ಲದೆ ಸರ್ಕಾರಿ ಜಾಗಗಳಲ್ಲಿ ವಿವಿಧ ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಬಿಸಿಲ ಬೇಗೆಯಲ್ಲಿ ಬೆಂದವರಿಗೆ ತಂಪಾದ ನೆರಳು ನೀಡುವ ಈ ಮರಗಳ ಹಿಂದೆ ನಿಂಗೇಗೌಡರ ಬೆವರ ಹನಿಗಳಿವೆ.
ಪ್ರಶಸ್ತಿ, ಸನ್ಮಾನ: ಇವರ ಈ ನಿಸ್ವಾರ್ಥ ಸೇವೆ ಗುರುತಿಸಿರುವ ಮದ್ದೂರು ತಾಲೂಕು ಆಡಳಿತ ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅದರಂತೆ ತಾಲೂಕು ಕೃಷಿಕ ಸಮಾಜ ನಿಂಗೇಗೌಡರ ಸೇವೆಯನ್ನು ಪರಿಗಣಿಸಿ ಗೌರವಿಸಿದೆ.
ಇಷ್ಟೆಲ್ಲಾ ತಮ್ಮ ಸ್ವಂತ ಶಕ್ತಿಯಿಂದ ಸಾಧಿಸಿರುವ ನಿಂಗೇಗೌಡರು, ಈ ಪ್ರದೇಶದಲ್ಲಿ ಒಂದು ಕೊಳವೆಬಾವಿ ತೆಗೆಸಿಕೊಟ್ಟರೆ ಬಹಳ ಉಪಯೋಗ ವಾಗುತ್ತದೆ ಎನ್ನುತ್ತಾರೆ. ತಾಲೂಕು ಆಡಳಿತ ನಿಂಗೇಗೌಡರ ಬೇಡಿಕೆಯನ್ನು ಈಡೇರಿಸಿದರೆ ನಿಜಕ್ಕೂ ಈ ಭಾಗದ ಪರಿಸರ ಚಿತ್ರಣವನ್ನೇ ಬದಲಿಸುವ ಹುಮ್ಮಸ್ಸಿನಲ್ಲಿದ್ದಾರೆ.
ನಾನು ಯಾವುದೇ ಸ್ವಾರ್ಥಕ್ಕಾಗಿ ಗಿಡ ಮರ ಬೆಳೆಸ್ತಿಲ್ಲ. ಈ ದಿನ ಪರಿಸರ ಹಾಳಾಗ್ತಿದೆ. ಒಳ್ಳೆಯ ಗಾಳಿ, ಆಹಾರ ಜನರಿಗೆ ಸಿಗ್ತಿಲ್ಲ. ಈಗಿನವರಲ್ಲಿ ಗಿಡಮರ ಬೆಳೆಸುವ ಬಗ್ಗೆ ಆಲೋಚನೆಯೇ ಇಲ್ಲ.
ನಾನು ಬದುಕಿರುವವರೆಗೂ ಪರಿಸರ ಕಾಪಾಡ್ತೀನಿ.
● ಮಣಿಗೆರೆ ನಿಂಗೇಗೌಡ,
ಪರಿಸರ ಪ್ರೇಮಿ
ಪ್ರಸ್ತುತ ದಿನದಲ್ಲಿ ಪರಿಸರ ನಾಶಗೊಳ್ಳುತ್ತಿದೆ. ಇಳಿ ವಯಸ್ಸಿನಲ್ಲೂ ನಿಂಗೇಗೌಡರು ಪರಿಸರದ ಬಗ್ಗೆ ಇಟ್ಟಿರುವ ಕಾಳಜಿಯನ್ನು ಸಮಾಜ ಶ್ಲಾಘಿ ಸಬೇಕು. ಇಂತಹ ಮನೋಭಾವೆ ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಪರಿಸರ ಉಳಿಯಲು ಸಾಧ್ಯ.
● ಮಹೇಂದ್ರಸಿಂಗ್‌ಕಾಳಪ್ಪ,
ಪರಿಸರ ಪ್ರೇಮಿ