Advertisement

Bharath Rice ಚುನಾವಣಾ ಗಿಮಿಕ್‌: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

09:45 PM Jul 06, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಆರಂಭಿಸಿದ್ದ “ಭಾರತ್‌ ಅಕ್ಕಿ’ ಯೋಜನೆ ಚುನಾವಣೆಗೋಸ್ಕರ ಮಾಡಿದ ಗಿಮಿಕ್‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Advertisement

ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದಾಗ ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನಿದ್ದರೂ ನೀಡಲಿಲ್ಲ. ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಅಕ್ಕಿ ನೀಡದ ಕಾರಣ ನಾವು ಜನರಿಗೆ ಹೆಚ್ಚುವರಿಯಾಗಿ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅವರೇ (ಕೇಂದ್ರ ಸರಕಾರ) ಪ್ರಾರಂಭಿಸಿದ ಭಾರತ್‌ ಅಕ್ಕಿ ಯೋಜನೆಯನ್ನು ಚುನಾವಣೆ ಮುಗಿದ ಮೇಲೆ ನಿಲ್ಲಿಸಿದ್ದಾರೆ ಎಂದರು.

ಹಸಿರು ಕ್ರಾಂತಿಯ ಹರಿಕಾರರಾಗಿರುವ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ದೇಶದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದ ಮಹಾನ್‌ ವ್ಯಕ್ತಿ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ.ಬಾಬು ಜಗಜೀವನರಾಂ ಭವನವನ್ನು ಜುಲೈ 13ರಂದು ಲೋಕಾರ್ಪಣೆ ಮಾಡಲಾಗುವುದು. ಈ ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಈ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು ಎಂದರು.

ಅನ್ನಭಾಗ್ಯದ ಅಕ್ಕಿಗಾಗಿ ಶೀಘ್ರ ಜೋಶಿ ಭೇಟಿ: ಸಚಿವ ಮುನಿಯಪ್ಪ
ಕೇಂದ್ರ ಆಹಾರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಶೀಘ್ರ ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಅಕ್ಕಿ ವಿತರಿಸಲು ಪ್ರಸ್ತಾವನೆಯನ್ನು ಸಲ್ಲಿಸುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಚುನಾವಣೆಯ ಸಂದರ್ಭ ಕೇಂದ್ರ ಸರಕಾರ ಭಾರತ್‌ ಅಕ್ಕಿಯನ್ನು ಕೆಜಿಗೆ 29 ರೂ.ಗೆ ವಿತರಿಸಿತು. ಈಗ ಬಂದ್‌ ಮಾಡಿದ್ದಾರೆ. ಇದು ಚುನಾವಣೆಯ ಗಿಮಿಕ್‌ ಆಗಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬಡವರ ಪರವಾಗಿಲ್ಲ. ಅದು ಶ್ರೀಮಂತರ ಪರ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next