Advertisement
ಅಂಗಡಿ-ಮುಂಗಟ್ಟುಗಳು ತೆರೆದಿದ್ದರೂ ಜನರ ಓಡಾಟ ವಿರಳವಾಗಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ವ್ಯವಹಾರ ಕಡಿಮೆಯಾಗಿತ್ತು. ಆಟೋ ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಇತರ ವಾಣಿಜ್ಯ ಬಳಕೆ ವಾಹನಗಳ ಓಡಾಟದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಕಂಡುಬಂತು. ಜಿಲ್ಲಾಡಳಿತವೇ ರಜೆ ಸಾರಿದ ಕಾರಣ ಶಾಲೆ ಕಾಲೇಜುಗಳು ತೆರೆದಿರಲಿಲ್ಲ. ಬ್ಯಾಂಕ್ ನೌಕರರ ಸಂಘಟನೆ ಮುಂದಾಳುಗಳು ಪ್ರತಿಭಟನ ಜಾಥಾದಲ್ಲಿ ಪಾಲ್ಗೊಂಡರು. ವ್ಯಾಪಕ ಪೊಲೀಸ್ ಬಂದೋಬಸ್ತು ಮಾಡಲಾಗಿದ್ದು, ಅಹಿತಕರ ಘಟನೆಗಳು ವರದಿಯಾಗಿಲ್ಲ. ಮಂಗಳೂರು ಡಿಸಿ ಕಚೇರಿ ಮುಂಭಾಗ, ಉಳ್ಳಾಲ, ಸುಳ್ಯ ಸಹಿತ ಕೆಲವೆಡೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ನಡೆಯಿತು.
ಸ್ಟೇಟ್‌ಬ್ಯಾಂಕ್ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಬಸ್ ಸಂಚಾರ ಆರಂಭವಾಗುತ್ತಿದ್ದಂತೆ ಪ್ರತಿಭಟನ ಕಾರರು ಬಸ್‌ಗಳಿಗೆ ತಡೆಯೊಡ್ಡಿದರು. ಪೊಲೀಸರು ಮಧ್ಯಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತೊಕ್ಕೊಟ್ಟು ಸಮೀಪ ಕುತ್ತಾರಿನಲ್ಲಿ ರಸ್ತೆಯಲ್ಲಿ ಬೆಳಗಿನ ಜಾವ ಟಯರ್‌ಗೆ ಬೆಂಕಿ ಹಾಕಿ ರಸ್ತೆ ತಡೆಯೊಡ್ಡುವ ಪ್ರಯತ್ನ ನಡೆಯಿತು. ಟ್ಯಾಕ್ಸಿ, ಇತರ ಟೂರಿಸ್ಟ್ ಕಾರುಗಳ ಓಡಾಟವಿದ್ದ ಕಾರಣ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ತೊಂದರೆ ಯಾಗಲಿಲ್ಲ. ರೈಲು ಯಾನದ ಮೇಲೆ ಹೆಚ್ಚಿನ ಪರಿಣಾಮವಾಗಿಲ್ಲ. ಉಡುಪಿ -ಮಂಗಳೂರು ನಡುವೆ ಕೆಲವೇ ಕೆಲವು ಎಕ್ಸ್‌ಪ್ರೆಸ್ ಹಾಗೂ ಖಾಸಗಿ ಬಸ್‌ಸಂಚಾರ ನಡೆಸಿದ್ದವು. ಉಡುಪಿಗೆ ಮಧ್ಯಾಹ್ನದ ಬಳಿಕ ಪೂರ್ಣ ಪ್ರಮಾಣದ ಬಸ್ ಸಂಚಾರ ಆರಂಭಿಸಲಾಯಿತು. ಕಾಸರಗೋಡಿಗೆ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೇರಳದ ಸಾರಿಗೆ ಬಸ್‌ಗಳು ಮಂಗಳೂರಿಗೂ ಬರಲಿಲ್ಲ.
ಹೆಚ್ಚಿನ ಪರಿಣಾಮವಿಲ್ಲ
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಕಡಬ, ಸುರತ್ಕಲ್ ಸೇರಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿಯೂ ಬಂದ್ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಉಡುಪಿಯಲ್ಲಿ ಅಪರಾಹ್ನ, ಜಿಲ್ಲೆಯ ವಿವಿಧೆಡೆ ಸಂಜೆ ವೇಳೆ ಕೆಎಸ್ಸಾರ್ಟಿಸಿ ಬಸ್‌ಗಳು, ರಾತ್ರಿ ವೇಳೆ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದವು. ಉಡುಪಿ, ಕಾರ್ಕಳ ತಾಲೂಕಿನಲ್ಲಿ ಆಟೋರಿಕ್ಷಾಗಳು ಸಂಚರಿಸಿದ್ದರೆ ಕುಂದಾಪುರದಲ್ಲಿ ಸಂಚರಿಸಲಿಲ್ಲ. ಉಡುಪಿ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ಮತ್ತು ಕಾರ್ಕಳ ತಾಲೂಕಿ ನಲ್ಲಿ ಅಂಗಡಿಗಳು ಬಹುತೇಕ ತೆರೆದಿ ದ್ದರೆ ಕುಂದಾಪುರದಲ್ಲಿ ಮುಚ್ಚಿದ್ದವು. ಹೊಟೇಲುಗಳು ತೆರೆದಿದ್ದವು. ಪ್ರತಿಭಟನ ಮೆರವಣಿಗೆ
ಉಡುಪಿ ಎಲ್ಲೆ„ಸಿ ಕಚೇರಿ ಬಳಿಯಿಂದ ಕಾರ್ಪೊರೇಶನ್ ಬ್ಯಾಂಕ್‌ವರೆಗೆ ಎಐಟಿಯುಸಿ, ಸಿಐಟಿಯು, ಇಂಟಕ್, ಎಐಬಿಇಎ ಮೊದಲಾದ ಸಂಘಟನೆಗಳ ಸದಸ್ಯರಿಂದ ಮೆರವಣಿಗೆ ನಡೆಯಿತು. ಕಾರ್ಕಳ ಬಸ್ ನಿಲ್ದಾಣದಿಂದ ಬಂಡೀಮಠದವರೆಗೆ ಕಾರ್ಮಿಕ ಸಂಘಟನೆಗಳ ಸದಸ್ಯರು ಮೆರವಣಿಗೆ ನಡೆಸಿದರು. ನಾವುಂದದಲ್ಲಿ ಸಿಪಿಎಂ ಕಾರ್ಯಕರ್ತರು ಜಾಥಾ ನಡೆಸಿದರು. ಕುಂದಾಪುರ, ತೆಕ್ಕಟ್ಟೆ, ಅಂಪಾರು, ಗುಜ್ಜಾಡಿ, ಆಜ್ರಿ, ಶಂಕರನಾರಾಯಣ, ಸಿದ್ದಾಪುರ ಮೊದಲಾದೆಡೆ ಕಮ್ಯುನಿಸ್ಟ್ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚಲು ಮನವಿ ಮಾಡಿದರು.
Related Articles
ಗುಜ್ಜಾಡಿಯಲ್ಲಿ ಅಂಗಡಿ ಮುಚ್ಚಿಸಲು ಬಂದವರಿಗೆ ಅಂಗಡಿ ಮಾಲಕ ಮೋಹನ್ ಮೊಗವೀರ ಬೈದ ವೀಡಿಯೋ ವೈರಲ್ ಆಗಿದೆ. “ಶಬರಿ ಮಲೆಯಲ್ಲಿ ಅನ್ಯಾಯ ಮಾಡಿದ ಸಿಪಿಎಂ ಮುಖ್ಯಮಂತ್ರಿ ವಿರುದ್ಧ ಕೇರಳಕ್ಕೆ ಹೋಗಿ ಪ್ರತಿಭಟನೆ ಮಾಡಿ. ಮೋದಿಯಂಥ ಒಳ್ಳೆಯ ಪ್ರಧಾನಿ ವಿರುದ್ಧ ನಿಮ್ಮ ಪ್ರತಿಭಟನೆಯೆ?’ ಎಂದು ಮೋಹನ್ ಹೇಳಿದಾಗ “ನಾವು ಮಾನವೀಯತೆ ಯಲ್ಲಿ ಬಂದ್ ಮಾಡಲು ಬಂದಿದ್ದೇವೆ’ ಎಂದು ಕಾರ್ಯಕರ್ತರು ಹೇಳಿದರು. “ಮಾನವೀಯತೆಯೆ? ದೇಶ ಮೊದಲು. ಮೋದಿ ದೇಶಕ್ಕಾಗಿ ಏನು ಕೊಟ್ಟಿಲ್ಲ? ಬೆಲೆ ಏರಿಕೆಯೆ? 2014ರಲ್ಲಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ತೋರಿಸುತ್ತೇನೆ. ತಾಕತ್ತಿದ್ದರೆ ಬನ್ನಿ’ ಎಂದು ಅಂಗಡಿ ಮಾಲಕ ಹೇಳಿದ ಕ್ಲಿಪ್ಪಿಂಗ್ ಹರಿದಾಡಿತು.
Advertisement
ರಕ್ಷಣೆ ಕೊಡದ ಪೊಲೀಸರು ಬಸ್ ಮಾಲಕರ ದೂರು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಉಡುಪಿ, ಕಾರ್ಕಳದಲ್ಲಿ ಬಸ್ ಓಡಿಸಲು ಬೆಳಗ್ಗೆ ಸಿದ್ಧತೆ ನಡೆಸಿದ್ದೆವು. ಒಂದೆರಡು ಟ್ರಿಪ್ ಕೂಡ ಮಾಡ ಲಾಗಿದೆ. ಆದರೆ ಪೊಲೀಸರು ರಕ್ಷಣೆ ನೀಡಲಿಲ್ಲ ಎಂದು ಬಸ್ ಮಾಲಕರು ದೂರಿದ್ದಾರೆ. ಪೊಲೀಸರಿಗೆ ಲಿಖೀತ ಮನವಿ ಸಲ್ಲಿಸಿದ್ದರೂ ಮಂಗಳವಾರ ಬೆಳಗ್ಗೆ ಬಸ್ ಓಡಿಸಲು ಮುಂದಾದಾಗ ತಡೆಯಲಾಯಿತು. ಪೊಲೀಸರು ಸ್ಥಳದಲ್ಲಿದ್ದರೂ ರಕ್ಷಣೆ ನೀಡಲಿಲ್ಲ. ಕಾರ್ಕಳ ನಗರ ಠಾಣಾಧಿಕಾರಿ ಕೂಡ ಸಹಕರಿಸಲಿಲ್ಲ. “ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ನಾವೇ ಹೊಣೆ’ ಎಂದು ಬರೆದುಕೊಡುವಂತೆ ತಿಳಿಸಿದ್ದಾರೆ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.