ಕೊಪ್ಪಳ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾರ್ಮಿಕರ ಹಕ್ಕು ಸೇರಿದಂತೆ ಟ್ರೇಡ್ ಯೂನಿಯನ್‌ಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದೆ. ಇದನ್ನು ವಿರೋಧಿಸಿ ಜ.8, 9ರಂದು ದೇಶವ್ಯಾಪಿ ಎರಡು ದಿನ ಹಲವು ಘಟನೆಗಳ
ಸಹಯೋಗದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಟಾರಾವ್ ಹೇಳಿದರು.
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ಮಾಡುವ ಕೆಲಸ ಮಾಡಿದೆ. ಅವರಿಗೆ ರಕ್ಷಣೆ ಕೊಡುವುದನ್ನು ಬಿಟ್ಟು ಅವರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಮಿಕರ ಟ್ರೇಡ್ ಯೂನಿಯನ್‌ಗಳ ಹಕ್ಕುಗಳನ್ನು ಮೊಟಕುಗೊಳಿಸಿ ಅಲ್ಲಿನ ಆಡಳಿತ ಮಂಡಳಿಗೆ ಯೂನಿಯನ್ ನೇಮಕ ಮಾಡುವ ಅಧಿಕಾರ ನೀಡಲು ಮುಂದಾಗುತ್ತಿದೆ ಎಂದರು.
ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಈ ಮೊದಲು ನಾಲ್ಕು ನಿಗಮಕ್ಕೂ ಒಬ್ಬರೇ ಮುಖ್ಯಸ್ಥರಿದ್ದರು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅಧಿಕಾರ, ರಾಜಕಾರಣಕ್ಕಾಗಿ ಪ್ರತಿ ನಿಗಮಕ್ಕೂ ಒಬ್ಬೊಬ್ಬ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ. ಸುಮ್ಮನೆ ಅವರ ಸಂಚಾರ, ಇತರೆ ವೆಚ್ಚಗಳಿಗೆ ಹಣ ವ್ಯಯವಾಗುತ್ತಿದೆ. ನಾಲ್ಕು ಸಾರಿಗೆ ನಿಗಮದ ವಾರ್ಷಿಕ ಆಯವ್ಯಯ 8 ಸಾವಿರ ಕೋಟಿಯಿದೆ. ರಾಜ್ಯ ಸರ್ಕಾರ ಶೇ.19ರಷ್ಟು ಮಾತ್ರ ನಿಗಮಗಳಿಗೆ ಅನುದಾನ ನೀಡುತ್ತಿದೆ. ಹೀಗಾಗಿಯೇ ನಿಗಮಗಳು ಪ್ರತಿ ವರ್ಷ ನಷ್ಟ ಅನುಭವಿಸುತ್ತಿವೆ. ಸರ್ಕಾರ ಕನಿಷ್ಟ ಸಾವಿರ ಕೋಟಿ ಅನುದಾನ ನೀಡಬೇಕು ಎಂದರು. ಕಾರ್ಮಿಕರ ಹಕ್ಕುಗಳು ಸೇರಿದಂತೆ ಇತರೆ ಬೇಡಿಕೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಗಮನ ಸೆಳೆಯಲು ಎರಡು ದಿನಗಳ ಕಾಲ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹಲವು ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದರು.