ಉಡುಪಿ/ ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50ಕ್ಕೂ ಹೆಚ್ಚು ಸ್ವತಂತ್ರ ನೌಕರ ಸಂಘಟನೆಗಳು ಜ. 8ರಂದು ಅಖೀಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಬಂದ್ ಕರೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ಉಡುಪಿ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಮುಷ್ಕರದಲ್ಲಿ ಭಾಗವಹಿ ಸುವ ಸಾಧ್ಯತೆಗಳಿವೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜ.8ರಂದು ಬೆಳಗ್ಗೆ 9 ಗಂಟೆಗೆ ಬೃಹತ್ ಮೆರವಣಿಗೆ, ಬಳಿಕ ಪ್ರತಿಭಟನ ಸಭೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಕೇವಲ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಕಾರಣಕ್ಕೆ ಜನಜೀವನ ಸಹಜವಾಗುವ ಸಾಧ್ಯತೆಗಳಿವೆ. ಸಿಟಿ, ಎಕ್ಸ್‌ಪ್ರೆಸ್ ಮತ್ತು ಸರಕಾರಿ ಬಸ್ ಸೇವೆ ಎಂದಿನಂತೆ ಇರುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಿಗೂ ಮುಷ್ಕರ ಪರಿಣಾಮ ಬೀರದು ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ, ಖಾಸಗಿ ಬಸ್, ರಿಕ್ಷಾದ ಕೆಲವು ಕಾರ್ಮಿಕ ಸಂಘಟನೆಯವರು ಪ್ರತಿಭಟನ ಸಭೆಯಲ್ಲಿ ಭಾಗವಹಿಸಲಿದ್ದು, ವಾಹನ ಸಂಚಾರ ಬಂದ್ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ದೇಶಮಟ್ಟದಲ್ಲಿ ನಡೆಯುವ ಬಂದ್ ಸ್ಥಿತಿಗತಿ ಗಮನಿಸಿ ಮಂಗಳವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಕೆಲವು ಸಂಘಟನೆಗಳು ತಿಳಿಸಿವೆ.
ಮಂಗಳೂರು ವ್ಯಾಪ್ತಿಯಲ್ಲಿ ಸರಕಾರಿ ಬಸ್ ನೌಕರರು ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾ ಜಂಟಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ ಯೂನಿಯನ್ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಬ್ಯಾಂಕ್‌ಗಳ ಕೆಲವು ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡರೂ ಬ್ಯಾಂಕ್ ಬಂದ್ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಮಂಗಳೂರಿನ ಪುರಭವನದ ಆವರಣದಲ್ಲಿ ಜ.8ರಂದು ಬೆಳಗ್ಗೆ 10.30ರಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನ ಸಭೆ ನಡೆಯಲಿದೆ.