Advertisement

ಆಕಾರದಲ್ಲಿ ನಾಟ್ಯದ ರಂಗಿದೆ…

06:00 AM May 23, 2018 | |

ನೆನಪಿದೆಯಾ? ಚಿಕ್ಕಂದಿನಲ್ಲಿ ಮನೆಯವರು ಒತ್ತಾಯ ಮಾಡಿ ನಿಮ್ಮನ್ನು ಭರತನಾಟ್ಯ ತರಗತಿಗಳಿಗೆ ಸೇರಿಸುತ್ತಿದ್ದಿದ್ದು. ವಾರದ 6 ದಿನ ಕ್ಲಾಸಿನಲ್ಲಿ ಕೂರುವುದು ಸಾಲದು ಅಂತ ಭರತನಾಟ್ಯ ಕ್ಲಾಸಿಗೂ ಹೋಗಬೇಕಾ ಎನ್ನುವುದೇ ಬಹುತೇಕ ಮಕ್ಕಳ ಅಭಿಪ್ರಾಯವಾಗಿರುತ್ತಿತ್ತು. ಹೀಗಾಗಿ ಭಾನುವಾರ ಒಲ್ಲದ ಮನಸ್ಸಿನಿಂದಲೇ ಭರತನಾಟ್ಯ ತರಗತಿಗಳಿಗೆ ಹಾಜರಾಗುತ್ತಿದ್ದ ಕಾಲವೊಂದಿತ್ತು. ಆದರೆ ಆ ಕಾಲ ಈಗಿಲ್ಲ. ಭರತನಾಟ್ಯ, ಕಲೆ ಮತ್ತು ಪರಂಪರೆಯ ಆಚೆಗೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಫಿಟ್‌ನೆಸ್‌ ಮಂತ್ರವಾಗಿಯೂ ಭರತನಾಟ್ಯವನ್ನು ಅಭ್ಯಾಸ ಮಾಡುವವರು ಹೆಚ್ಚುತ್ತಿದ್ದಾರೆ. ಭರತನಾಟ್ಯ ಒಂದಕ್ಕೇ ಈ ಫಿಟ್‌ನೆಸ್‌ ಸ್ಥಾನ ಪ್ರಾಪ್ತವಾಗಿಲ್ಲ. ಕಥಕ್‌ ಮತ್ತು ಒಡಿಸ್ಸಿಗೂ ಫಿಟ್‌ನೆಸ್‌ಪ್ರಿಯರು ಮಾರುಹೋಗಿದ್ದಾರೆ. ಅಂದಹಾಗೆ, ಅದಕ್ಕೆ ಕಾರಣ ಇಲ್ಲದೇ ಇಲ್ಲ. ಶಾಸ್ತ್ರೀಯ ನೃತ್ಯದ ಅಭ್ಯಾಸದಲ್ಲಿ ತೊಡಗುವುದರಿಂದ ಹಲವು ಬಗೆಯ ಉಪಯೋಗಗಳಿವೆ. ಏನೇನು ಅಂದಿರಾ?

Advertisement

ಭರತನಾಟ್ಯ
ಭರತನಾಟ್ಯ ಅಭ್ಯಾಸ ಮಾಡುವುದರಿಂದ ದೇಹದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುವುದು ಸಾಧ್ಯವಾಗುತ್ತದೆ. ಭರತನಾಟ್ಯದ ಶುರುವಿನಲ್ಲಿ ನಮಸ್ಕಾರ ಹಾಕುವ ಭಂಗಿ ಇದೆಯಲ್ಲ, ಅದು ಜಿಮ್ಮಿನಲ್ಲಿ ಮಾಡುವ ಸ್ಕ್ವಾಟ್‌ ಕಸರತ್ತಿಗೆ ಸಮನಾದುದು ಎನ್ನುವುದು ತಜ್ಞರ ಅಬಿಮತ. ಇದೊಂದು ಉದಾಹರಣೆಯಷ್ಟೆ. ಇಂಥ ಹಲವು ಉಪಯೋಗಗಳನ್ನು ಭರತನಾಟ್ಯದಿಂದ ಪಡೆಯಬಹುದು. ದೈಹಿಕ ಒಂದೇ ಅಲ್ಲ, ಮಾನಸಿಕ ಆರೋಗ್ಯ, ಉತ್ತಮ ಸೌಂದರ್ಯ ಕಾಪಾಡಿಕೊಳ್ಳುವುದೂ ಇದರಿಂದ ಸಾಧ್ಯ.

ಕಥಕ್‌
ದೇಹದ ತೂಕವನ್ನು ಇಳಿಸಿಕೊಳ್ಳಲು ಕಥಕ್‌ ತುಂಬಾ ಸಹಕಾರಿ. ಕಥಕ್‌ ನೃತ್ಯಾಭ್ಯಾಸ ಮಾಡುವವರು ಕಾಲಿಗೆ ಭಾರದ ಗೆಜ್ಜೆಯನ್ನು ಕಟ್ಟುವುದರಿಂದ ಕಾಲಿಗೆ ಹೆಚ್ಚಿನ ವ್ಯಾಯಾಮ ದೊರಕುತ್ತದೆ. ಹೀಗಾಗಿ ರನ್ನಿಂಗ್‌ನಿಂದ ಆಗುವ ಪ್ರಯೋಜನವೂ ಕಥಕ್‌ ಅಬ್ಯಾಸ ಮಾಡುವುದರಿಂದ ಸಿಗುತ್ತದೆ. 

ಒಡಿಸ್ಸಿ
ಒಡಿಸ್ಸಿ ನೃತ್ಯಾಭ್ಯಾಸ ಮಾಡುವಾಗ ರಕ್ತ ಸಂಚಾರ ಹೆಚ್ಚುವುದು. ಮಾಂಸಖಂಡಗಳಿಗೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ. ಅಲ್ಲದೆ ಈ ನೃತ್ಯ ಪ್ರಕಾರದಲ್ಲಿ ಮುಖದ ಮೇಲೆ ವಿವಿಧ ಬಗೆಯ ಭಾವಗಳನ್ನು ವ್ಯಕ್ತಪಡಿಸಬೇಕಾಗಿ ಬರುವುದರಿಂದ ಮುಖದ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ದೊರಕಿದಂತಾಗಿ, ಅವು ಫಿಟ್‌ ಆಗಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next