Advertisement

ಭರತನಾಟ್ಯ, ರೂಪಕದಲ್ಲಿ ಕಿರಿ-ಹಿರಿ ಪ್ರತಿಭೆಗಳ ಮಿಂಚು

05:14 PM Jun 20, 2019 | mahesh |

ಸೊಗಸಾದ ನಾಟ್ಯ, ಅದಕ್ಕೆ ತಕ್ಕ ಲಾಸ್ಯ, ಸುಂದರ ಮುಖವರ್ಣಿಕೆ, ಉತ್ತಮ ವೇಷ, ಮಕ್ಕಳ ಅದ್ಭುತ ಅಭಿನಯ ಇವು ಅಷ್ಟೂ ಪ್ರೇಕ್ಷಕರನ್ನು ಕದಲದಂತೆ ನಿಲ್ಲಿಸಿದ್ದು ಪುತ್ತೂರು ವೈಷ್ಣವಿ ನಾಟ್ಯಾಲಯದ ಬೆಳ್ಳಾರೆ ಶಾಖೆಯ ವಾರ್ಷಿಕೊತ್ಸವದ ನೃತ್ಯಸಂಭ್ರಮದಲ್ಲಿ. 3 ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳ ವರೆಗಿನ ತಂಡವನ್ನು ತರಬೇತುಗೊಳಿಸಿ, ಭರತನಾಟ್ಯ, ಜನಪದ ನೃತ್ಯ ಮತ್ತು ಅಯಪ್ಪ ಸ್ವಾಮಿಯ ರೂಪಕವನ್ನು ಸೊಗಸಾಗಿ ಪ್ರಸ್ತುತ ಪಡಿಸಿ ರಂಗದಲ್ಲಿ ಮಿನುಗುವಂತೆ ಮಾಡಿದ ಕೀರ್ತಿ ಗುರುಗಳಾದ ವಿ| ಯೋಗೀಶ್ವರಿ ಜಯಪ್ರಕಾಶ್‌ ಅವರದ್ದು. ನಿರೂಪಣೆ ಮತ್ತು ನಟುವಾಂಗದಲ್ಲಿ ಕೂಡ ಮಿಂಚಿದ ಯೋಗಿಶ್ವರಿ ತನ್ನ ಸ್ವರ ಮಾಧುರ್ಯದಿಂದ ಚಕಿತಗೊಳಿಸಿದರು.

Advertisement

ಪ್ರಥಮವಾಗಿ ಮೂಡಿಬಂದ ಅಹದಿ ರಾಗ, ಆದಿ ತಾಳದ ಪುಷ್ಪಾಂಜಲಿ ಮತ್ತು ಗಣಪತಿ ಸ್ತುತಿಯಲ್ಲಿ ಸೀನಿಯರ್‌ ವಿದ್ಯಾರ್ಥಿಗಳು ಮನ ಸೆಳೆದರು. ಅನಂತರ ರೇವತಿ ರಾಗದ ಭೋ ಶಂಭೋ ನೃತ್ಯಕ್ಕೆ ಜ್ಯೂನಿಯರ್‌ ವಿದ್ಯಾರ್ಥಿಗಳಿಗೆ ಸಭಿಕರು ಶರಣಾಗಬೇಕಾಯಿತು. ಗಣಪತಿ ಹಾಡು, ಆನೆ ಬಂತಮ್ಮ, ಗಜವದನ ಬೇಡುವೆ, ಕೃಷ್ಣನ ಕುರಿತ ಹರಿ ಆಡಿದನೆ ನೃತ್ಯಗಳು ಮುದ್ದು ಮಕ್ಕಳ ಮುಗ್ಧ ಭಾವಾಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಮಾಳಿಕೆ ರಾಗದ ರಂಜನಿ ಮಾಲ, ಸಾರಥಿ ರಾಗದ ಜತಿಸ್ವರ, ಕೃಷ್ಣನ ಕೊಳಲಿನ ಸ್ವರವೆ ಪ್ರಮುಖವಾಗಿರುವ ವೃಂದಾವನೆ ವೇಣುವಾಜೆ ನೃತ್ಯಗಳು ಅಪೇಕ್ಷೆಗೆ ಮೀರಿದ್ದಾಗಿತ್ತು. ಸುಬ್ರಹ್ಮಣ್ಯನ ಕುರಿತ ಕೌಸ್ತುಂ, ಭಜೇ ಮೃದಂಗ್‌ ಎನ್ನುವ ಮರಾಠಿ ಭಜನ್‌, ಶಿವನ ಕುರಿತ ತಮಿಳು ನೃತ್ಯಗಳಿಗೆ ಪ್ರೇಕ್ಷಕರು ತಲೆದೂಗಿದರು.

ಮೂಡುತ ರವಿ ರಂಗು ಚೆಲ್ಲೆ„ತೆ ಭಾವಗೀತೆಗೆ ಹಾಕಿದ ಹೆಜ್ಜೆ ಮತ್ತು ಸುಗ್ಗಿಕಾಲ ಹಿಗ್ಗಿ ಬಂದಿತೋ, ಚೆಲುವಯ್ಯ ಚೆಲುವೋ ಕೋಲಾಟದ ನೃತ್ಯದ ಯಶಸ್ಸಿಗೆ ಚಪ್ಪಾಳೆಯೇ ಸಾಕ್ಷಿಯಾಯಿತು. ಆನಂದ ತಾಂಡವೇಶ್ವರ‌ ಎಂಬ ಶಿವನೃತ್ಯ, ನಂದಾಗೋಪ ನಂದನಾ ವೇಣುಲೋಲ ಎಂಬ ಲಘು ಶಾಸ್ತ್ರೀಯ ನೃತ್ಯ, ಹನುಮಂತ ದೇವ ನಮೋ ಎಂಬ ಸಣ್ಣ ರೂಪಕ ಮನಸೂರೆಗೊಂಡಿತು.

ಕೊನೆಗೆ ಮೂಡಿಬಂದ ಅಯ್ಯಪ್ಪನ ನೃತ್ಯ ರೂಪಕವಂತೂ ವಿದ್ಯಾರ್ಥಿಗ‌ಳ ನಾಟ್ಯ ಪ್ರತಿಭೆಯ ಜೊತೆಗೆ ಭಾವಪೂರಿತ ಅಭಿನಯ ಚತುರತೆಗೆ ಮಾರು ಹೋಗಬೇಕಾಯಿತು. ಕವಯತ್ರಿ ಅಶ್ವಿ‌ನಿ ಕೋಡಿಬೈಲು ರಚನೆಯ ಈ ರೂಪಕಕ್ಕೆ ರಾಗ ಸಂಯೋಜನೆ ಮಾಡಿ ಹಾಡಿದ ವಿ|ವೆಳ್ಳಿಕ್ಕೋತ್‌ ವಿಷ್ಣು ಭಟ್‌ ಪ್ರಶಂಶೆಗೆ ಪಾತ್ರರಾದರು. ಸರಳ ಸುಂದರ ಸಂಯೋಜನೆಯ ರೂಪಕದಲ್ಲಿ ಅಯ್ಯಪ್ಪನಾಗಿ ಬಂದ ಸ್ನೇಹಾ ಭಟ್‌ ಉತ್ತಮ ನಾಟ್ಯ ಚಾತುರ್ಯವನ್ನು ಮೆರೆದರು. ಮಹಿಷಿಯಾಗಿ ಹೇಮಸ್ವಾತಿ ನೃತ್ಯಾಭಿನಯ ಮಂತ್ರಮುಗ್ಧಗೊಳಿಸಿತು. ಶಿವ ಮತ್ತು ಮೋಹಿನಿಯಾಗಿ ದೇವಿಕಾ ಮತ್ತು ಅವನಿ ತಾವೇನು ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸಿದರು. ಪಂದಲದ ರಾಜನಾಗಿ ಕವನಾ, ರಾಣಿಯಾಗಿ ಅಭಿಜ್ಞಾ ಮತ್ತು ಮಂತ್ರಿಯಾಗಿ ಬಂದ ರಕ್ಷಿತಾ ಇವರು ಸರಳ ಶುದ್ಧ ಭಾವಭಿನಯದಿಂದ ಮನಗೆದ್ದರು. ಋಷಿಮುನಿಗಳು, ನರ್ತಕಿಯರು, ಅಯ್ಯಪ್ಪ ಮತ್ತು ಸುಬ್ರಹ್ಮಣ್ಯನ ಬಾಲ್ಯದ ತುಂಟಾಟವನ್ನು ಶರ್ಮಿಳಿ ಮತ್ತು ಶರಧಿ ಸೊಗಸಾಗಿ ಪ್ರಸ್ತುತ ಪಡಿಸಿದರು. ಭಸ್ಮಾಸುರನಾಗಿ ಅಂಕಿತಾ ಕೂಡ ತನ್ನ ಪಾತ್ರವನ್ನು ಸ್ಮರಣೀಯವಾಗಿಸಿದರು.

ಹಾಡುಗಾರಿಕೆಯಲ್ಲಿ ವಿ|ವಸಂತ ಕುಮಾರ್‌ ಗೋಸಾಡ, ಮೃದಂಗದಲ್ಲಿ ವಿ| ಗೀತೇಶ್‌ ಕುಮರ್‌ ನೀಲೆಶ್ವರ, ಕೊಳಲಿನಲ್ಲಿ ವಿ| ರಾಜಗೋಪಾಲ್‌ ಕಾಂಞಂಗಾಡ್‌, ಕೀಬೋರ್ಡ್‌ನಲ್ಲಿ ಬಾಬಣ್ಣ ಪುತ್ತೂರು, ರಿದಂ ಪ್ಯಾಡ್‌ನ‌ಲ್ಲಿ ಸಚಿನ್‌ ಪುತ್ತೂರು ಸಹಕರಿಸಿದರು.

Advertisement

ಶಶಿಕುಮಾರ್‌ ಬಿ.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next