ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಮಂಗಳವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಒಂದು ಕೋಟಿ ಉದ್ಯೋಗ, ಮೌಲ್ಯಾಧಾರಿತ ಶಿಕ್ಷಣ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ದತೆಯಲ್ಲಿದ್ದು, ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 30 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಒಂದು ಕೋಟಿ ಹೊಸ ಉದ್ಯೋಗ, ಎಲ್ಲರಿಗೂ ಮನೆ ಹಾಗೂ ಮಹಾರಾಷ್ಟ್ರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪಕ್ಷ ಪುನರಾಯ್ಕೆಗೊಂಡರೆ ಈ ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸುವುದಾಗಿ ಭರವಸೆ ನೀಡಿದೆ. ಅಲ್ಲದೇ ಜ್ಯೋತಿ ರಾವ್ ಫುಲೆ, ಪತ್ನಿ ಸಾವಿತ್ರಿಭಾಯಿ ಫುಲೆ ಹಾಗೂ ವಿಡಿ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡಲು ಶಿಫಾರಸು ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ವಿವರಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷ ಜೆಪಿ ನಡ್ಡಾ 44 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಟ್ರಿಲಿಯನ್ ಡಾಲರ್ ಆರ್ಥಿಕಾಭಿವೃದ್ಧಿ, ರಾಜ್ಯದಲ್ಲಿನ ರೈತರಿಗೆ 12 ಗಂಟೆಗಳ ಕಾಲ ವಿದ್ಯುತ್, ಬರಗಾಲ ಮುಕ್ತ ಮಹಾರಾಷ್ಟ್ರದ ನಿರ್ಮಾಣ, ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.