Advertisement
ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿಯ ಬಗೆಗಿನ ಎರಡನೇ ದಿನ ಬುಧವಾರದ ಚರ್ಚೆಯನ್ನು ಆರಂಭಿಸಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಹಿಂಸೆಯಿಂದ ತತ್ತರಿಸಿದ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲೇ ಇಲ್ಲ. ಏಕೆಂದರೆ ಆ ರಾಜ್ಯವನ್ನು ಮೋದಿಯವರು ದೇಶದ ಒಂದು ಭಾಗ ಎಂದು ಪರಿಗಣಿಸಿಯೇ ಇಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
Related Articles
ಈಶಾನ್ಯ ರಾಜ್ಯವನ್ನು ಬಿಜೆಪಿ ವಿಭಜಿಸಿದೆ ಎಂದು ಆರೋಪಿಸಿದ ರಾಹುಲ್, ಆ ರಾಜ್ಯವನ್ನು ಭಾರತದ ಭಾಗ ಎಂದು ಪ್ರಧಾನಿ ಪರಿಗಣಿಸುತ್ತಿಲ್ಲ. ಹೀಗಾಗಿಯೇ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಹೋಗಲೇ ಇಲ್ಲ ಎಂದು ಹೇಳಿದ್ದಾರೆ. ಸೇನೆಯನ್ನು ಆ ರಾಜ್ಯಕ್ಕೆ ಕಳುಹಿಸುವ ಮೂಲಕ ತೆಷಮಯ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರಕ್ಕೆ ಸಾಧ್ಯವಿದೆ.
Advertisement
ಕೇಂದ್ರ ಸರ್ಕಾರಕ್ಕೆ ಆ ರೀತಿ ಮಾಡಲು ಮನಸ್ಸೇ ಇಲ್ಲ ಎಂದರು. ಆ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಮಹಿಳೆಯರು, ಮಕ್ಕಳನ್ನು ಭೇಟಿ ಮಾಡಿ ಅವರ ನೋವು ಆಲಿಸಿದ್ದೆ. ಆ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಬೇಕಿತ್ತು ಎಂದರು ರಾಹುಲ್ ಗಾಂಧಿ.
ರಾಮಾಯಣವನ್ನು ಉಲ್ಲೇಖೀಸಿದ ರಾಹುಲ್, “ರಾಮ ರಾವಣನನ್ನು ಕೊಲ್ಲಲಿಲ್ಲ. ಹನುಮಂತ ಲಂಕೆಯನ್ನು ಸುಡಲಿಲ್ಲ. ಎರಡೂ ಘಟನೆಗಳು ಉಂಟಾದದ್ದು ಆತನ ಅಹಂಕಾರದಿಂದ’ ಎಂದರು. “ನೀವು ಎಲ್ಲೆಡೆ ಸೀಮೆ ಎಣ್ಣೆ ಸುರಿದಿದ್ದೀರಿ, ಮಣಿಪುರದಲ್ಲಿ ಬೆಂಕಿ ಹಚ್ಚಿದ್ದೀರಿ. ಅದನ್ನೇ ಹರ್ಯಾಣದಲ್ಲಿ ಪುನರಾವರ್ತಿಸಲು ಮುಂದಾಗಿದ್ದೀರಿ’ ಎಂದು ಆಕ್ರೋಶಭರಿತರಾಗಿ ಮಾತನಾಡಿದರು. ಅವರ ಈ ಮಾತುಗಳಿಗೆ ಬಿಜೆಪಿ ಸದಸ್ಯರು ಪ್ರಬಲ ಆಕ್ಷೇಪ ಮಾಡಿ, ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಅದಾನಿ ಜತೆ…:“ಪ್ರಧಾನಿ ಮೋದಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ಮಾತುಗಳನ್ನು ಮಾತ್ರ ಕೇಳುತ್ತಾರೆ’ ಎಂದು ಹೇಳಿದ ರಾಹುಲ್, ಇಬ್ಬರು ವಿಮಾನದಲ್ಲಿ ಕುಳಿತಿದ್ದ ಹಳೆಯ ಫೋಟೋ ಪ್ರದರ್ಶಿಸಿದರು. ಆ ಸಂದರ್ಭದಲ್ಲಿ ಕೂಡ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಸದನ ನಿಯಮಗಳನ್ನು ಉಲ್ಲೇಖೀಸಿ ಸಂಯಮ ಕಾಯ್ದುಕೊಂಡು ಮಾತನಾಡುವಂತೆ ಸೂಚಿಸಿದರು. ಯಾತ್ರೆ ಇನ್ನೂ ನಿಂತಿಲ್ಲ:
ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, “ನಾನು ಯಾವ ಕಾರಣಕ್ಕಾಗಿ ಯಾತ್ರೆ ಶುರು ಮಾಡಿದ್ದೆ ಎನ್ನುವುದು ಆರಂಭದಲ್ಲಿ ಗೊತ್ತಾಗಲಿಲ್ಲ. ದೇಶವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅದನ್ನು ಆರಂಭಿಸಿದೆ” ಎಂದರು. ತಮ್ಮ ಲೋಕಸಭಾ ಸದಸ್ಯತ್ವವನ್ನು ಪುನಸ್ಥಾಪಿಸಿದ್ದಕ್ಕೆ ಸ್ಪೀಕರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ಹಿಂದಿನ ಬಾರಿ ಮಾತನಾಡಿದ್ದ ವೇಳೆ ನಿಮಗೆ (ಸ್ಪೀಕರ್) ನೋವು ಉಂಟಾಗುವಂತೆ ಮಾತನಾಡಿದ್ದೆ. ಅದಾನಿಯವರನ್ನು ಕೇಂದ್ರೀಕರಿಸಿ ಮಾತನಾಡಿದ್ದೆ. ಹಿರಿಯ ನಾಯಕರಾಗಿರುವ ನಿಮಗೆ ಅದರಿಂದ ನೋವಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದರು. “ನಾನು ಯಾವತ್ತೂ ಸತ್ಯವನ್ನೇ ಮಾತನಾಡುತ್ತೇನೆ. ಇವತ್ತಿನ ನನ್ನ ಭಾಷಣದಿಂದ ಬಿಜೆಪಿಯ ಸ್ನೇಹಿತರು ಭಯಪಡಬೇಕಾಗಿಲ್ಲ. ಕರಾವಳಿಯಿಂದ ಕಾಶ್ಮೀರದ ಹಿಮಾಚ್ಛಾದಿತ ಪರ್ವತದ ವರೆಗೆ ನಾನು ನಡೆದಿದ್ದೇನೆ. ಆ ಸಂದರ್ಭದಲ್ಲಿ ನನ್ನ ಗುರಿ ಏನು ಎಂದು ಪ್ರಶ್ನಿಸಿದ್ದರು. ಅಂದ ಹಾಗೆ ಯಾತ್ರೆ ಇನ್ನೂ ಪೂರ್ತಿಯಾಗಿಲ್ಲ’ ಎಂದರು. ರಾಹುಲ್ ಕೋಟ್‌ಗಳು
ಮಣಿಪುರದಲ್ಲಿ ಭಾರತ ಮಾತೆಯನ್ನು ನೀವು ಸಾಯಿಸಿದ್ದೀರಿ. ನಿಮ್ಮ ರಾಜಕೀಯ ಮಣಿಪುರವನ್ನು ಮಾತ್ರ ಕೊಂದಿಲ್ಲ, ಅದು ಭಾರತವನ್ನೇ ಆ ರಾಜ್ಯದಲ್ಲಿ ಬಲಿ ಪಡೆದಿದೆ. ನೀವು ಭಾರತ ಮಾತೆಯ ರಕ್ಷಕರಲ್ಲ. ನೀವು ಆಕೆಯ ಹಂತಕರು. ರಾವಣ ಮೇಘನಾದ ಮತ್ತು ಕುಂಭಕರ್ಣನ ಮಾತುಗಳನ್ನು ಮಾತ್ರ ಕೇಳುತ್ತಿದ್ದ. ಅದೇ ರೀತಿ. ಮೋದಿಯವರು ಅದಾನಿ ಮತ್ತು ಅಮಿತ್ ಶಾ ಅವರ ಮಾತುಗಳನ್ನು ಮಾತ್ರ ಕೇಳುತ್ತಾರೆ. ರಾಮ ರಾವಣನನ್ನು ಕೊಲ್ಲಲಿಲ್ಲ. ಹನುಮಂತ ಲಂಕೆಯನ್ನು ಸುಡಲಿಲ್ಲ. ಎರಡೂ ಘಟನೆಗಳು ಉಂಟಾದದ್ದು ಆತನ ಅಹಂಕಾರದಿಂದ. ನೀವು ದೇಶವನ್ನು ಬೆಂಕಿಗೆ ಒಡ್ಡಲು ಮುಂದಾಗಿದ್ದೀರಿ. ಮಣಿಪುರದಲ್ಲಿ ಮೊದಲ ಬಾರಿಗೆ ಕಿಚ್ಚು ಹಚ್ಚಲು ಶುರು ಮಾಡಿದ್ದೀರಿ. ನಂತರ ಹರ್ಯಾಣದಲ್ಲಿ ಮುಂದುವರಿಸಿದ್ದೀರಿ. ಈಗ ದೇಶಕ್ಕೇ ಕಿಚ್ಚು ಹಚ್ಚಲು ಸಿದ್ಧತೆ ನಡೆಸಿದ್ದೀರಿ. ನನ್ನ ತಾಯಿಯೊಬ್ಬರು ಇಲ್ಲಿ ಕುಳಿತಿದ್ದಾರೆ. ಆದರೆ, ನನ್ನ ಮತ್ತೂಬ್ಬ ತಾಯಿಯನ್ನು ಮಣಿಪುರದಲ್ಲಿ ಕೊಂದಿದ್ದೀರಿ. ಈ ದೇಶದ ಸೇನೆಗೆ ಮಾತ್ರ ಅಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಿದೆ. ನೀವು ಈ ಪ್ರಯತ್ನದಲ್ಲಿ ಇಲ್ಲ.