ಮುಂಬೈ: ಸುಮಾರು ಎರಡು ತಿಂಗಳ ಕಾಲ ದಕ್ಷಿಣ ಭಾರತದ ಐದು ರಾಜ್ಯಗಳನ್ನು ಸಂಚರಿಸಿದ ನಂತರ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಸೋಮವಾರ ಮಹಾರಾಷ್ಟ್ರ ಪ್ರವೇಶಿಸಲು ಸಿದ್ಧವಾಗಿದೆ. ಆದರೆ, ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿಗೂಢತೆ ಮುಂದುವರಿದಿದೆ.
ತಮಿಳುನಾಡಿನಿಂದ ಪ್ರಾರಂಭವಾದ ‘ಭಾರತ್ ಜೋಡೋ ಯಾತ್ರೆ’ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಮೂಲಕ ಸಾಗಿ ದಕ್ಷಿಣ ಭಾರತ ಯಾತ್ರೆ ಪೂರ್ಣಗೊಳಿಸಿದೆ.
ದೇಗ್ಲೂರ್ ಪಟ್ಟಣದ ಸ್ಥಳೀಯ ಗಿರಣಿ ಮೈದಾನದಲ್ಲಿ ರಾತ್ರಿ ವಿಶ್ರಾಂತಿ ಪಡೆದ ನಂತರ, ರಾಹುಲ್ ಗಾಂಧಿ ಅವರು ಮಂಗಳವಾರ ಬೆಳಿಗ್ಗೆ 14 ದಿನಗಳ ಮಹಾರಾಷ್ಟ್ರದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಇದು ಆರು ಲೋಕಸಭೆ ಮತ್ತು 15 ವಿಧಾನಸಭಾ ಕ್ಷೇತ್ರಗಳ ಮೂಲಕ ಐದು ಮರಾಠವಾಡ-ವಿದರ್ಭ ಪ್ರದೇಶಗಳ ಜಿಲ್ಲೆಗಳ 381 ಕಿ.ಮೀ. ಗಳನ್ನು ಯಾತ್ರೆ ಕ್ರಮಿಸಲಿದೆ.
ಇದನ್ನೂ ಓದಿ:ಅದ್ದೂರಿ ಮದುವೆಯಾಗಿ ಹಣ ದುಂದುವೆಚ್ಚ ಮಾಡದಿರಿ… ನವಜೋಡಿಗಳಿಗೆ ಪ್ರಧಾನಿ ಕಿವಿಮಾತು
ನಾಂದೇಡ್, ಹಿಂಗೋಲಿ, ವಾಶಿಮ್, ಅಕೋಲಾ ಮತ್ತು ಬುಲ್ಧಾನ ಜಿಲ್ಲೆಗಳ ಮೂಲಕ ನಡೆದ ನಂತರ ‘ಭಾರತ್ ಜೋಡೋ ಯಾತ್ರಯು’ ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ. ಆದರೂ ಸ್ಥಳೀಯ ನಾಯಕರ ಬೇಡಿಕೆ ಕಾರಣದಿಂದ ನಂತರ ವೇಳಾಪಟ್ಟಿಯನ್ನು ಬದಲಾಯಿಸಲು ಮತ್ತು ಮಹಾರಾಷ್ಟ್ರದಲ್ಲಿ ಇನ್ನೂ ಮೂರು ದಿನಗಳ ಹೆಚ್ಚಿನ ಯಾತ್ರೆ ಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ನವೆಂಬರ್ 10 ರಂದು ನಾಂದೇಡ್ ಮತ್ತು ನವೆಂಬರ್ 18 ರಂದು ಬುಲ್ಧಾನದಲ್ಲಿ ಎರಡು ದೊಡ್ಡ ರಾಲಿಗಳು ನಡೆಯಲಿದೆ.