Advertisement
ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ನಡೆದ ಮೆಗಾ ರ‍್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಡಿಎಂಕೆ, ಜೆಎಂಎಂ, ಬಿಎಸ್‌ಪಿ, ಎನ್‌ಸಿ, ಪಿಡಿಪಿ, ಸಿಪಿಐ, ಆರ್‌ಎಸ್‌ಪಿ, ವಿಸಿಕೆ ಮತ್ತು ಐಯುಎಂಎಲ್ ನಾಯಕರು ಭಾಗಿಯಾಗಿದ್ದರು.
ಬಳಿಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಯಾತ್ರೆಯ ಸಮಾರೋಪದಲ್ಲಿ ಭಾವನಾತ್ಮಕ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಾನು ಯಾತ್ರೆ ನಡೆಸುವಾಗ, “ನೀವು ದೇಶದ ಎಲ್ಲಾದರೂ ಪಾದಯಾತ್ರೆ ಮಾಡಿ, ಆದರೆ, ಕಾಶ್ಮೀರದಲ್ಲಿ ಮಾತ್ರ ಮಾಡಬೇಡಿ. ಅಲ್ಲಿ ನಿಮ್ಮ ಮೇಲೆ ಗ್ರೆನೇಡ್ ದಾಳಿಯಾಗುವ ಸಾಧ್ಯತೆಯಿದೆ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು. ಆದರೆ, ನಾನು ಅಂದೇ ಕಾಶ್ಮೀರದಲ್ಲಿ ನಡೆದೇ ತೀರುವುದಾಗಿ ನಿರ್ಧರಿಸಿದೆ. ಜತೆಗೆ, ನನ್ನನ್ನು ಯಾರು ದ್ವೇಷಿಸುತ್ತಾರೋ ಅವರಿಗೆ ನನ್ನ ಬಿಳಿ ಟಿಶರ್ಟ್‌ನ ಬಣ್ಣವನ್ನು ಕೆಂಪಗಾಗಿಸುವ ಅವಕಾಶವೊಂದನ್ನು ಕೊಟ್ಟೇ ಬಿಡೋಣ ಎಂದು ಯೋಚಿಸಿದೆ. ಆದರೆ, ನನಗೆ ಕಾಶ್ಮೀರದ ಜನ ಗ್ರೆನೇಡನ್ನು ನೀಡಲಿಲ್ಲ, ಬದಲಿಗೆ ಪ್ರೀತಿ ಕೊಟ್ಟರು’ ಎಂದು ಹೇಳಿದರು.
Related Articles
Advertisement
ನನಗಾಗಿಯಲ್ಲ:ನಾನು ಈ ಯಾತ್ರೆಯನ್ನು ನನಗಾಗಿಯಾಗಲೀ, ಕಾಂಗ್ರೆಸ್‌ಗಾಗಿಯಾಗಲೀ ಮಾಡಿದ್ದಲ್ಲ. ದೇಶದ ಜನರಿಗಾಗಿ ಮಾಡಿದ್ದು. ಈ ದೇಶದ ಅಡಿಪಾಯವನ್ನು ನಾಶ ಮಾಡಲು ಹೊರಟಿರುವ ಸಿದ್ಧಾಂತದ ವಿರುದ್ಧ ನಿಲ್ಲುವುದು, ಉದಾರವಾದ, ಜಾತ್ಯತೀತ ಮೌಲ್ಯಗಳನ್ನು ರಕ್ಷಿಸುವುದೇ ನಮ್ಮ ಉದ್ದೇಶ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿ ಯಾವೊಬ್ಬ ಬಿಜೆಪಿ ನಾಯಕನೂ ಪಾದಯಾತ್ರೆ ನಡೆಸಲಾರ. ಏಕೆಂದರೆ, ಇಲ್ಲಿ ನಡೆಯಲು ಅವರು ಹೆದರುತ್ತಾರೆ ಎಂದೂ ರಾಹುಲ್ ಹೇಳಿದರು. ಪ್ರತಿಪಕ್ಷ ನಾಯಕರ ಕರೆ:
ದೇಶದ ಎಲ್ಲ ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಬೇಕು ಎಂದು ಸಿಪಿಐ ನಾಯಕ ಡಿ. ರಾಜಾ ಕರೆ ನೀಡಿದರೆ, ರಾಹುಲ್ ಅವರು ಪಶ್ಚಿಮದಿಂದ ಪೂರ್ವಕ್ಕೆ ಮತ್ತೂಂದು ಯಾತ್ರೆ ಕೈಗೊಳ್ಳಬೇಕು ಮತ್ತು ನಾನೂ ಅವರೊಂದಿಗೆ ಹೆಜ್ಜೆಹಾಕಬೇಕು ಎಂದು ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಇಚ್ಛೆ ವ್ಯಕ್ತಪಡಿಸಿದರು. ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಮಳೆ ಸುರಿಯುತ್ತಿದ್ದ ಕಾರಣ ಎಲ್ಲ ಹೆದ್ದಾರಿಗಳೂ ಬಂದ್ ಆಗಿದ್ದವು, ವಿಮಾನಗಳ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಹೀಗಾಗಿ, ರ‍್ಯಾಲಿ ಗೂ ಅಡ್ಡಿ ಉಂಟಾಯಿತು. ಹೀಗಿದ್ದರೂ 12ಕ್ಕೂ ಹೆಚ್ಚು ಪಕ್ಷಗಳ ನಾಯಕರು ಹರಸಾಹಸಪಟ್ಟು ರ‍್ಯಾಲಿ ಸ್ಥಳ ತಲುಪಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಚುನಾವಣೆ ಗೆಲ್ಲುವುದಕ್ಕಾಗಿ ನಡೆದಿದ್ದಲ್ಲ. ಬದಲಿಗೆ ದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಹಬ್ಬುತ್ತಿರುವ ದ್ವೇಷವನ್ನು ಎದುರಿಸುವುದಕ್ಕಾಗಿ ನಡೆದಿದ್ದು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ ರಾಹುಲ್-ಪ್ರಿಯಾಂಕಾ ವಿಡಿಯೋ ವೈರಲ್
ಜೋಡೋ ಯಾತ್ರೆ ಪೂರ್ಣಗೊಳಿಸಿದ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕಾ ವಾದ್ರಾ ಅವರ ಜತೆಗೆ ಕಾಶ್ಮೀರದಲ್ಲಿ ಮಂಜಿನ ನಡುವೆ ತುಂಟಾಟವಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲ್ಯದಲ್ಲಿ ತಂಗಿ ಜತೆಗೆ ಆಟವಾಡುತ್ತಿದ್ದಂತೆಯೇ, ಈಗಲೂ ಒಬ್ಬರಿಗೊಬ್ಬರು ಮಂಜಿನ ಗಡ್ಡೆಗಳನ್ನು ಎಸೆಯುತ್ತಾ, ಛೇಡಿಸುತ್ತಾ, ಒಬ್ಬರನ್ನೊಬ್ಬರು ತಬ್ಬಿಕೊಂಡು ಸುಂದರವಾದ ಸಹೋದರತ್ವದ ಬಾಂಧವ್ಯವನ್ನು ಸವಿದಿದ್ದಾರೆ. ಈ ವಿಡಿಯೋವನ್ನು ರಾಹುಲ್ ಅಭಿಮಾನಿಗಳು ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.