Advertisement

ಭಾರತ್‌ ಗ್ರೂಪ್‌ ಆಫ್‌ ಕಂಪೆನಿ ಕಾ.ನಿ. ನಿರ್ದೇಶಕ ಅನಂತ್‌ ಜಿ. ಪೈ ನಿಧನ

10:33 AM Jul 15, 2019 | keerthan |

ಮಂಗಳೂರು: ರಾಜ್ಯ- ರಾಷ್ಟ್ರ ಮಟ್ಟದ ಪ್ರತಿಷ್ಠಿತ ಉದ್ಯಮ ಸಂಸ್ಥೆ ಮಂಗಳೂರಿನ ಭಾರತ್‌ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್‌ ಜಿ. ಪೈ (46) ಅವರು ಜು.14ರಂದು ಹೃದಯಾಘಾತದಿಂದ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಿಧನ ಹೊಂದಿದರು.

Advertisement

ಇಂದೋರ್‌ನಲ್ಲಿ ಆಯೋಜನೆಗೊಂಡಿದ್ದ ವಾಣಿಜ್ಯ ಸಮಾವೇಶದಲ್ಲಿ ಭಾಗವಹಿಸಿದ ಅನಂತ್‌ ಜಿ. ಪೈ ಅವರು ಅಲ್ಲಿನ ಹೊಟೇಲ್‌ನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಸುಮಾ ಅನಂತ್‌ ಪೈ, ಪುತ್ರಿ ಅನ್ವಿತಾ, ಸಹೋದರ ಆನಂದ್‌ ಜಿ. ಪೈ ಮತ್ತು ಸಹೋದರಿಯರಾದ ರೂಪಾ ವಿ. ನಾಯಕ್‌, ರೇಖಾ ಡಿ. ಕಿಣಿ ಅವರನ್ನು ಅಗಲಿದ್ದಾರೆ.

ಅವರು ಭಾರತ್‌ ಸಮೂಹ ಸಂಸ್ಥೆಯ ಸ್ಥಾಪಕ ಬಿ. ಮಂಜುನಾಥ ಪೈ ಅವರ ಮೊಮ್ಮಗ. ಭಾರತ್‌ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಬಿ. ಗಣಪತಿ ಪೈ ಮತ್ತು ಗೀತಾ ಪೈ ದಂಪತಿಯ ಪುತ್ರ ಅನಂತ್‌ ಗಣಪತಿ ಪೈ ಅವರು 1973ರ ಎ. 6ರಂದು ಜನಿಸಿದರು. ಚಿನ್ಮಯ ಪ್ರಾಥಮಿಕ ಶಾಲೆ, ಕೆನರಾ ಹೈಸ್ಕೂಲ್‌, ಸಂತ ಅಲೋಶಿಯಸ್‌ ಮತ್ತು ಎಸ್‌ಡಿಎಂ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು “ಅಂತಾರಾಷ್ಟ್ರೀಯ ಮಾರುಕಟ್ಟೆ’ ಎಂಬ ವಿಷಯದಲ್ಲಿ ಮಂಗಳೂರು ವಿ.ವಿ.ಯಿಂದ ಎಂಬಿಎ ಪದವಿ ಪಡೆದಿದ್ದರು. ಆಕ್ಸ್‌ಫರ್ಡ್‌ ವಿವಿಯ ಉದ್ಯಮಶೀಲತ ಸರ್ಟಿಫಿಕೇಟ್‌ ಪ್ರೋಗ್ರಾಮ್‌ನಲ್ಲಿಯೂ ಪಾಲ್ಗೊಂಡಿ ದ್ದರು. ಶಾಲಾ ದಿನಗಳಲ್ಲಿ ಸ್ಕೌಟ್ಸ್‌ ನಲ್ಲಿ ಅನಂತ್‌ ಜಿ. ಪೈ ಅವರು ವಿಶೇಷ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಭಾರತದ ಅಂದಿನ ರಾಷ್ಟ್ರಪತಿ ಆರ್‌. ವೆಂಕಟರಾಮನ್‌ ಅವರಿಂದ “ಸ್ಕೌಟ್ಸ್‌ ಅವಾರ್ಡ್‌’ ಅನ್ನು 1989-90ರಲ್ಲಿ ಪಡೆದಿದ್ದರು. ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.

1994ರಿಂದ ಭಾರತ್‌ ಸಮೂಹ ಸಂಸ್ಥೆಯಲ್ಲಿ ತೊಡಗಿಸಿಕೊಂಡ ಅವರು, ಸಮೂಹದ ವಿಸ್ತರಣೆ, ವೈವಿಧಿಕರಣ ಕಾರ್ಯಗಳ ಮುಂದಾಳತ್ವ ವಹಿಸಿದ್ದರು. ಭಾರತ್‌ ಬೀಡಿ ವರ್ಕ್ಸ್ ಪ್ರೈ.ಲಿ., ಭಾರತ್‌ ಅಟೋ ಕಾರ್ ಪ್ರೈ.ಲಿ., ಅಲಕಾನಂದ ಪ್ರಿಂಟರ್ ಪ್ರೈ.ಲಿ. (ಭಾರತ್‌ ಬುಕ್‌ ಮಾರ್ಕ್‌ ಪುಸ್ತಕ ಮಳಿಗೆ ಸಮೂಹ), ಭಾರತ್‌ ಪ್ರಿಂಟರ್ ಆ್ಯಂಡ್‌ ಕಾರ್ಕಳ ಇನ್ವೆಸ್ಟ್‌ಮೆಂಟ್ಸ್‌ ಪ್ರೈ.ಲಿ. ಸೇರಿದಂತೆ ವಿವಿಧ ಅಂಗಸಂಸ್ಥೆಗಳ ಮಾರ್ಕೆಟಿಂಗ್‌ ಮತ್ತು ಫೈನಾನ್ಸ್‌ ವಿಭಾಗಗಳ ಮುಖ್ಯಸ್ಥರಾಗಿದ್ದುಕೊಂಡು, ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಭಾರತ್‌ ಬಿಲ್ಡರ್ ಮತ್ತು ಸಿನೆಪ್ಲೆಕ್ಸ್‌ ಪ್ರೈ.ಲಿ. (ಭಾರತ್‌ ಬಿಗ್‌ ಸಿನೆಮಾಸ್‌ ಮಲ್ಟಿಪ್ಲೆಕ್ಸ್‌) ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಷೇರು ಮಾರುಕಟ್ಟೆ ಮತ್ತು ಆರ್ಥಿಕ ತಜ್ಞರಾಗಿದ್ದ ಅವರು ಬಂಡವಾಳ ಹೂಡಿಕೆ ಕುರಿತಂತೆ ವಿಶೇಷ ಜ್ಞಾನ ಹೊಂದಿದ್ದು, ಸಮೂಹ ಸಂಸ್ಥೆಯ ಬೆಳವಣಿಗೆಗೆ ದೂರದರ್ಶಿತ್ವದ ಮಾರ್ಗದರ್ಶನ ನೀಡಿದ್ದರು. ಭಾರತ್‌ ಬಿಲ್ಡರ್ ಸಂಸ್ಥೆಯು ಅನಂತ್‌ ಜಿ. ಪೈ ಅವರ ಕನಸಿನ ಕೂಸು ಆಗಿದ್ದು, 2006ರಲ್ಲಿ ಅವರು ಬಿಜೈನಲ್ಲಿ ನಿರ್ಮಿಸಿದ “ಭಾರತ್‌ ಮಾಲ್‌’ ಮಂಗಳೂರಿನ ಆಧುನಿಕ ಶಾಪಿಂಗ್‌ ಮಾಲ್‌ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಮೊದಲ ಮಾಲ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

Advertisement

ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಿ. ಮಂಜುನಾಥ್‌ ಪೈ ಕಲ್ಚರಲ್‌ ಫೌಂಡೇಶನ್‌ ಮತ್ತು ಮಂಜುನಾಥ್‌ ದಾಮೋದರ ಪೈ ಚಾರಿಟೆಬಲ್‌ ಟ್ರಸ್ಟ್‌ನ ಟ್ರಸ್ಟಿಯಾಗಿದ್ದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಟ್ರಸ್ಟ್‌ನ ಉಪಾಧ್ಯಕ್ಷ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು. ನಗರದ ಚಿನ್ಮಯ ಹೈಸ್ಕೂಲ್‌ನ ಉಪಾಧ್ಯಕ್ಷರಾಗಿ, ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಸಂಘಟನ ಸಮಿತಿಯ ಸದಸ್ಯರಾಗಿ, ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಅನುಪಮ ಸೇವೆ ಸಲ್ಲಿಸಿದ್ದರು.
ರೇಡಿಯೋ ಆಲಿಸುವುದು ಅವರ ಹವ್ಯಾಸವಾಗಿತ್ತು. ಹ್ಯಾಮ್‌ ರೇಡಿಯೊ ನಿರ್ವಾಹಕ ಲೈಸನ್ಸ್‌ ಹೊಂದಿದ್ದ ಅವರು ಮಂಗಳೂರು ಅಮೆಚೂರ್‌ ರೇಡಿಯೋ  ಕ್ಲಬ್‌ನ ಅಧ್ಯಕ್ಷರಾಗಿ, ಅಮೆಚೂರ್‌ ರೇಡಿಯೋ ಸೊಸೈಟಿ ಆಫ್‌ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹ್ಯಾಮ್‌ ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 10 ವರ್ಷಗಳಲ್ಲಿ ಸಿಕ್ಯೂ ವರ್ಲ್ಡ್ವೈಡ್‌ ಹ್ಯಾಮ್‌ ರೇಡಿಯೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು.

ರೋಟರಿ ಇಂಟರ್‌ನ್ಯಾಶನಲ್‌ ಮೂಲಕಗ್ರೂಪ್‌ ಸ್ಟಡಿ ಎಕ್ಸ್‌ಚೇಂಜ್‌ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದರು. ಅಂಚೆ ಚೀಟಿ ಮತ್ತು ನಾಣ್ಯ, ಕರೆನ್ಸಿ ನೋಟ್‌ಗಳ ಸಂಗ್ರಹ, ಪಾಶ್ಚಾತ್ಯ ಸಂಗೀತ, ಆಟೋ ರ್ಯಾಲಿ, ಟ್ರೆಕಿಂಗ್‌ ಹವ್ಯಾಸ ಹೊಂದಿದ್ದರು.

ಸಂತಾಪ
ಅನಂತ್‌ ಜಿ. ಪೈ ನಿಧನಕ್ಕೆ ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌, ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ, ಇನ್‌ಫೋಸಿಸ್‌ ಫೌಂಡೇಶನ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಪ್ರಮುಖ ರಾಮದಾಸ್‌ ಕಾಮತ್‌ ಯು.ಹಾಂಗ್ಯೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಜಿ. ಪೈ, ಮಾಜಿ ಸಚಿವ ಬಿ. ರಮಾನಾಥ ರೈ, ಮಣಿಪಾಲ ಪೈ ಕುಟುಂಬದ ಮೋಹನದಾಸ್‌ ಪೈ, ರಾಮದಾಸ ಪೈ, ಸತೀಶ್‌ ಪೈ, ನಾರಾಯಣ ಪೈ, ಅಶೋಕ್‌ ಪೈ, ಗೌತಮ್‌ ಪೈ, ರಂಜನ್‌ ಪೈ ಮತ್ತು ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಎಚ್‌.ಎಸ್‌. ಬಲ್ಲಾಳ್‌ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನಕ್ಕೆ ಅವಕಾಶ
ಅನಂತ ಜಿ. ಪೈ ಅವರ ಪಾರ್ಥಿವ ಶರೀರವನ್ನು ಇಂದೋರ್‌ನಿಂದ ಸೋಮವಾರ ಬೆಳಗ್ಗೆ ವಿಮಾನದಲ್ಲಿ ಮಂಗಳೂರಿಗೆ ತಂದು ಮಧ್ಯಾಹ್ನ 12 ಗಂಟೆಗೆ ಕದ್ರಿಯಲ್ಲಿರುವ ಭಾರತ್‌ ಸಮೂಹ ಸಂಸ್ಥೆಯ ಆಡಳಿತ ಕಚೇರಿ ಹಿಂಭಾಗದ ಅಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಬೋಳೂರು ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next