ಸಾಂತಾಕ್ರೂಜ್: ಕರಾವಳಿ ಕನ್ನಡಿಗರು ಮುಂಬಯಿಗೆ ಬಂದು ಮೊದಲಿಗೆ ಸಮುದಾಯ ಸಂಘಟನೆಗಳನ್ನು ಕಟ್ಟಿ ಅನಂತರ ಹೊಟೇಲ್ ಉದ್ಯಮ, ಶಿಕ್ಷಣ ಹಾಗೂ ಹಣಕಾಸು ಸಂಸ್ಥೆಗಳನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಶನ್ ಹಾಗೂ ಭಾರತ್ ಬ್ಯಾಂಕ್‌ನ ಸಾಧನೆ ಮಹತ್ತರವಾದುದು.
ಭಾರತ್ ಬ್ಯಾಂಕ್‌ನ ಸ್ಥಾಪಕ ಕಾರ್ಯಾಧ್ಯಕ್ಷ ವರದ ಉಳ್ಳಾಲ್ ಅವರ ಕಾಲದಿಂದ ಹಂತ ಹಂತವಾಗಿ ಪ್ರಗತಿಪಥದಲ್ಲಿ ಸಾಗುತ್ತ ಬಂದಿರುವ ಭಾರತ್ ಬ್ಯಾಂಕ್ ಮಾಜಿ ಕಾರ್ಯಾಧ್ಯಕ್ಷ ದಿ| ಜಯ ಸಿ. ಸುವರ್ಣ ಅವರ ನೇತೃತ್ವದಲ್ಲಿ ಸುವರ್ಣ ಯುಗವನ್ನು ಕಂಡಿರುವುದು ಅಭಿಮಾನದ ಸಂಗತಿಯಾಗಿದೆ. ಪ್ರಸ್ತುತ ಭಾರತ್ ಬ್ಯಾಂಕ್ ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿ ಸರ್ವಾಂಗೀಣ ಪ್ರಗತಿಯೊಂದಿಗೆ ತುಳು-ಕನ್ನಡಿಗರ ಹೆಮ್ಮೆಯಾಗಿ ಬೆಳೆದು ನಿಂತಿದೆ ಎಂದು “ಆಹಾರ್’ನ ಸಲಹೆಗಾರ ಮತ್ತು ಮಾಜಿ ಅಧ್ಯಕ್ಷ ನಾರಾಯಣ ಎಂ. ಆಳ್ವ ತಿಳಿಸಿದರು.
ಇದನ್ನೂ ಓದಿ:ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಂಚಲ್ ಠಾಕೂರ್
ಭಾರತ್ ಬ್ಯಾಂಕ್‌ನ ಸಾಂತಾಕ್ರೂಜ್ ಪಶ್ಚಿಮ ಶಾಖೆಯಲ್ಲಿ ಆ. 21ರಂದು ಜರಗಿದ ಬ್ಯಾಂಕ್‌ನ 43ನೇ ಸಂಸ್ಥಾಪನ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ್ ಬ್ಯಾಂಕ್‌ನ ಸಿಬಂದಿಯ ಸಹಕಾರ ಹಾಗೂ ಗ್ರಾಹಕ ಸೇವೆ ನಿಜಕ್ಕೂ ಪ್ರಶಂಸನೀಯ. ಅಂತೆಯೇ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಗಮನಾರ್ಹವಾಗಿದೆ. ಬ್ಯಾಂಕ್‌ನ ಪ್ರಸ್ತುತ ಕಾರ್ಯಾಧ್ಯಕ್ಷ ಯು. ಎಸ್. ಪೂಜಾರಿಯವರ ನೇತೃತ್ವದಲ್ಲಿ ಬ್ಯಾಂಕ್ ಇನ್ನಷ್ಟು ಪ್ರಗತಿ ಹೊಂದಲಿ ಎಂದು ತಿಳಿಸಿ ಬ್ಯಾಂಕ್‌ನ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಹಕರಾದ ಗೋಪಿ ತೆಹಲಿಯಾನಿ, ಚಂದ್ರಕಾಂತ್ ಪಾಟಕ್, ನರೇಶ್ ಮೋರೆ ಮೊದಲಾದವರು ಉಪಸ್ಥಿತರಿದ್ದರು. ಶಾಖೆಯ ಇತರ ಸಿಬಂದಿ ಮಹೇಶ್ ಪೂಜಾರಿ ಕಾರ್ಕಳ, ಸುಮಿತ್ರಾ ಸಫಲಿಗ, ವಿಜಯ ಕುಮಾರ್ ಮಿಶ್ರ, ಐಶ್ವರ್ಯಾ ಋಷಿ, ಸರಿತಾ ಪೂಜಾರಿ, ಧೀರಜ್ ಪೂಜಾರಿ, ಬಾಬು ಶಂಕರ್ ಪೂಜಾರಿ, ಯತೀಶ್ ಉದ್ಯಾವರ್, ರತ್ನಾಕರ್ ಬಂಗೇರ, ರಾಜೇಶ್ ಎಂ. ಚೌಧರಿ ಮೊದಲಾದವರು ಭಾಗವಹಿಸಿದ್ದರು.
ಶಾಖಾ ಪ್ರಬಂಧಕ ರಿತೇಶ್ ಅಮೀನ್ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಬಂಧಕಿ ಹೀರಾ ಶ್ರೀಧರ್ ವಂದಿಸಿದರು.