Advertisement

ಇಂದು-ನಾಳೆ ಬಂದ್‌; ಸಾರಿಗೆ ಸೇವೆ ವ್ಯತ್ಯಯ

12:30 AM Jan 08, 2019 | Team Udayavani |

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮತ್ತು ಬುಧವಾರ ದೇಶಾದ್ಯಂತ ಕರೆ ನೀಡಿರುವ “ಸಾರ್ವತ್ರಿಕ ಮುಷ್ಕರ’ಕ್ಕೆ ಸಾರಿಗೆ ನೌಕರರ ಯೂನಿಯನ್‌ಗಳು ಸೇರಿ ಪ್ರಮುಖ ಕಾರ್ಮಿಕ ಸಂಘಟನೆಗಳು ಕೈಜೋಡಿಸಿದ್ದು, ಮೊದಲ ದಿನ ಇದರ ಬಿಸಿ ಸಾರ್ವಜನಿಕರಿಗೆ ತಟ್ಟುವ ಸಾಧ್ಯತೆಯಿದೆ.

Advertisement

ಸರ್ಕಾರಿ ಬಸ್‌ಗಳು, ಆಟೋಗಳು ಬಹುತೇಕ ಸ್ತಬ್ದಗೊಳ್ಳಲಿವೆ. ಮುಷ್ಕರದ ಕಾವು ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಹುತೇಕ ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿವೆ.

ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಬೆಂಗಳೂರು ಪ್ರವಾಸಿ ವಾಹನಗಳ ಮಾಲಿಕರ ಸಂಘ, ರಾಜ್ಯ ಲಾರಿ ಮಾಲೀಕರ ಸಂಘ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಸಂಘ,ಕೈಗಾರಿಕಾ ಸಂಘಟನೆಗಳು ಮುಷ್ಕರಕ್ಕೆ ನೈತಿಕ ಬೆಂಬಲ ಸೂಚಿಸಿವೆ. ಅಲ್ಲಲ್ಲಿ ಇವುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬಸ್‌ ರಸ್ತೆಗಿಳಿಯಲ್ಲ: ಎರಡೂ ದಿನಗಳು ಸಾರಿಗೆ
ನಿಗಮಗಳ ಯಾವುದೇ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಈ ಸಂಬಂಧ ನೌಕರರಿಗೆ ಯೂನಿಯನ್‌ನಿಂದ ಸೂಚನೆ ನೀಡಲಾಗಿದೆ.
ಕರ್ತವ್ಯಕ್ಕೆ ಗೈರುಹಾಜರಾಗಿ ನೌಕರರೆಲ್ಲರೂ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ಮಧ್ಯಾಹ್ನ 12ಕ್ಕೆ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕಾರ್ಮಿಕ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ರ್ಯಾಲಿ ನಡೆಸಲಿದ್ದಾರೆ.

ಅದೇ ರೀತಿ, ಬುಧವಾರ ಬೆಳಗ್ಗೆ 10.30ಕ್ಕೆ ಪುರಭವನದಿಂದ ರಾಜಭವನದವರೆಗೆ ರ್ಯಾಲಿ ಹೊರಡಲಿದೆ ಎಂದು ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್‌ ವರ್ಕರ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಅನಂತ
ಸುಬ್ಬರಾವ್‌ ತಿಳಿಸಿದ್ದಾರೆ.

Advertisement

ಮುಷ್ಕರದಿಂದ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಆದರೆ, ಹೋರಾಟ ಶಾಂತಿಯುತವಾಗಿ ಇರಬೇಕು. ನಿಗಮದ ಆಸ್ತಿ-ಪಾಸ್ತಿಗಳಿಗೆ ಯಾವುದೇ ರೀತಿ ಧಕ್ಕೆ ಉಂಟುಮಾಡಬಾರದು ಎಂದು ಮನವಿ ಮಾಡಲಾಗಿದೆ. ಜತೆಗೆ ಬಸ್‌ಗಳು ಮತ್ತು ನಿಲ್ದಾಣಗಳಿಗೆ ಪೊಲೀಸ್‌ ರಕ್ಷಣೆಗೂ ಕೋರಲಾಗಿದೆ. ಎಂದಿನಂತೆ ಬಸ್‌ಗಳು ಮಂಗಳವಾರ ಬೆಳಿಗ್ಗೆ ರಸ್ತೆಗಿಳಿಯಲಿವೆ.

ಪರಿಸ್ಥಿತಿ ನೋಡಿಕೊಂಡು ಕಾರ್ಯಾಚರಣೆ ಮಾಡಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದರು. ಈ ಮಧ್ಯೆ ಬೆಂಗಳೂರು, ರಾಮನಗರ, ಕೊಪ್ಪಳ, ಗದಗ,ಬೆಳಗಾವಿ, ಬೀದರ್‌, ಕಾರವಾರ, ಶಿವಮೊಗ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.

ಆದರೆ ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿಲ್ಲ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಬೆಳಿಗ್ಗೆ ರಜೆ ಘೋಷಣೆಯಾಗುವ ಸಾಧ್ಯತೆ ಇದೆ. ಕೆಲ ಆಟೋ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿದ್ದು, ಯಾವುದೇ ಆಟೋಗಳು ರಸ್ತೆಗಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಆಟೋಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವುದು ಖಚಿತ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ. ಆದರೆ, ಈ ಮುಷ್ಕರಕ್ಕೆ ತಮ್ಮ ಬೆಂಬಲವಿಲ್ಲ ಎಂದು ಬೆಂಗಳೂರು ಆಟೋ ಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ನೈತಿಕ ಬೆಂಬಲ ಮಾತ್ರ: ಎಪಿಎಂಸಿಗಳು, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಸೇರಿದಂತೆ ಕೈಗಾರಿಕಾ ಸಂಘಟನೆಗಳು, ಬೆಂಗಳೂರು ಪ್ರವಾಸಿ ವಾಹನಗಳ ಮಾಲಿಕರ ಸಂಘ ಮುಷ್ಕರಕ್ಕೆ ನೈತಿಕ ಬೆಂಬಲ ಸೂಚಿಸಿವೆ. ಹಾಗಾಗಿ, ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಆಯಾ ಸಂಘಗಳ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಷ್ಕರಕ್ಕೆ ನೈತಿಕ ಬೆಂಬಲ ಇದ್ದು, ಬ್ಯಾಂಕ್‌ಗಳ ಸೇವೆ ಎಂದಿನಂತೆ ಇರಲಿವೆ ಎಂದು ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಅಸೋಸಿಯೇಷನ್‌ (ಎಐಡಿಒಎ) ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಶೇಖರ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಆದರೆ, ಅಖೀಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ ಅಧ್ಯಕ್ಷ ವಸಂತ್‌ ರೈ ನೌಕರರು ಕರ್ತವ್ಯಕ್ಕೆ ಹಾಜರಾಗುವುದು ಅನುಮಾನ ಎಂದು ಹೇಳಿದ್ದಾರೆ.

ಸಾರಿಗೆ ಬಸ್‌ ಸಂಚಾರ ಸ್ಥಗಿತ
ಮದ್ದೂರು
: ವಿವಿಧ ಸಂಘಟನೆಗಳು ನಡೆಸುತ್ತಿರುವ ಎರಡು ದಿನಗಳ ಮುಷ್ಕರದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕರ, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಭಾರತ್‌ ಬಂದ್‌
ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸುವ ಜತೆಗೆ ನಾಳಿನ ಮುಷ್ಕರದ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.

ಬೆಂ. ವಿವಿ ಪರಿಷ್ಕೃತ ಪಟ್ಟಿ
ಜ. 8 ಮತ್ತು 9ರಂದು ನಿಗದಿಯಾಗಿದ್ದ ಬೆಂಗಳೂರು ವಿವಿಯ ಬಿಪಿಇಡಿ ಪರೀಕ್ಷೆ ಜ. 11 ಹಾಗೂ 12 ರಂದು, ಎಲ್‌ಎಲ್‌ಬಿ ಪರೀಕ್ಷೆ ಜ. 11,14, 17 ಮತ್ತು ಎಂಎ ಕನ್ನಡ ಪರೀಕ್ಷೆ ಜ. 24ರಂದು,ಎಂಎ ಇಂಗ್ಲಿಷ್‌, ಅರ್ಥಶಾಸOಉ, ಸಮಾಜಶಾಸOಉ,ರಾಜ್ಯಶಾಸOಉ, ಮಹಿಳಾ ಅಧ್ಯಯನ, ಗ್ರಾಮೀಣ ಅಧ್ಯಯನ, ಪತ್ರಿಕೋದ್ಯಮ, ಎಂಎಸ್ಸಿ (ಗಣಿತ), ಎಂಕಾಂ ಪರೀಕ್ಷೆ ಜ. 23 ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಎಂಎಸ್‌ಡಬ್ಲೂé ಪರೀಕ್ಷೆ ಜ.22, ಎಂ.ಎಸ್ಸಿ. ಭೌತವಿಜ್ಞಾನ, ಸಸ್ಯವಿಜ್ಞಾನ, ಜೀವವಿಜ್ಞಾನ, ಎಲೆಕ್ಟ್ರಾನಿಕ್‌ ಮೀಡಿಯಾ ಪರೀಕ್ಷೆ ಜ.21ರಂದು ಹಾಗೂ ಎಂ.ಎಸ್ಸಿ. ರಸಾಯನ ವಿಜ್ಞಾನ, ಪ್ರಾಣಿ ವಿಜ್ಞಾನ, ಮನೋ ವಿಜ್ಞಾನ, ಪರಿಸರ ವಿಜ್ಞಾನ,ಕಂಪ್ಯೂಟರ್‌ ವಿಜ್ಞಾನ ಪರೀಕ್ಷೆಗಳು ಜ.18 ಹಾಗೂ ಎಂ.ಸಿ.ಎ.(ಸಿಬಿಸಿಎಸ್‌) ಪರೀಕ್ಷೆ ಜ.22ರಂದು ನಿಗದಿ ಮಾಡಿ ಆದೇಶ ಹೊರಡಿಸಿದೆ.

ಪರೀಕ್ಷೆ ಮುಂದೂಡಿಕೆ
ಬೆಂಗಳೂರು
ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಕುವೆಂಪು ವಿವಿ, ದಾವಣಗೆರೆ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿವಿ,ಗಂಗೂಬಾಯಿ ಹಾನಗಲ್‌ ಸಂಗೀತ ವಿವಿ ಸೇರಿ ರಾಜ್ಯದ ಬಹುತೇಕ ವಿಶ್ವವಿದ್ಯಾಲಗಳು ಜ. 8 ಮತ್ತು 9ರಂದು ನಿಗದಿಯಾಗಿದ್ದ ಪದವಿ, ಸ್ನಾತಕೋತ್ತರ ಹಾಗೂ ಬಿಇಡಿ, ಬಿಪಿಇಡಿ ಹಾಗೂ ಎಲ್‌ಎಲ್‌ಬಿ,ಎಲ್‌ಎಲ್‌ಎಂ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಿ ಆದೇಶ ಹೊರಡಿಸಿವೆ. ಎಲ್ಲ ವಿವಿಗಳ ಬದಲಾದ ದಿನಾಂಕಗಳ ವೇಳಾಪಟ್ಟಿ ಆಯಾ ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾ ಹಂತದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಅಥವಾ ಕಾರ್ಯನಿರ್ವಹಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ. ಜಾಫ‌ರ್‌ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೂರ್ವ ಸಿದಟಛಿತಾ ಪರೀಕ್ಷೆಯನ್ನು ಮುಂದೂಡಲಾಗಿದೆ. ಜ.8 ಮತ್ತು 9ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಜ.14 ಮತ್ತು 16ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸಾಂಕೇತಿಕ ಬೆಂಬಲ
ಬೆಂಗಳೂರು:
ಭಾರತ್‌ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾಂಕೇತಿಕ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ, “ಹಲವು ಕಾರ್ಮಿಕ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿವೆ. ಇನ್ನು ಕನ್ನಡ ಚಿತ್ರರಂಗ ಕೂಡ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದ್ದು, ಕಾರ್ಮಿಕರ ಬೇಡಿಕೆಗಳ ಪರ ಈ ಬಂದ್‌ ನಡೆಯುತ್ತಿರುವುದರಿಂದ ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಈ ಬಂದ್‌ಗೆ ಬಾಹ್ಯ ಬೆಂಬಲ ನೀಡಿದೆ’ಎಂದು ತಿಳಿಸಿದ್ದಾರೆ.

ಪೂರ್ಣ ಪ್ರಮಾಣದ ಸೇವೆಗೆ ಸುತ್ತೋಲೆ
ವಿವಿಧ ಸಂಘಟನೆಗಳು ಭಾರತ್‌ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ವೈದ್ಯೆàತರ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಈ ಎರಡು ದಿನ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ರಜೆಯ ಮೇಲೆ ತೆರಳಬಾರದು. ಜಿಲ್ಲೆಯ ಎಲ್ಲಾ ಹಂತಗಳ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಹಾಗೂ ಸಿಬ್ಬಂದಿಗಳು ಹಾಜರಾತಿ ಕುರಿತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಶಸOಉಚಿಕಿತ್ಸಕರು ಖಚಿತಪಡಿಸಿಕೊಂಡು ವರದಿ ನೀಡುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಯಾತಕ್ಕಾಗಿ ಈ
ಮುಷ್ಕರ?

– ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಕೆಲವೊಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಒಕ್ಕೂಟಗಳು 2 ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.ಇವರ ಬೇಡಿಕೆಗಳೇನೆಂದರೆ;
– ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸುವ ಮೂಲಕ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು
– ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡು, ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು ಯಾವುದೇ ವಿನಾಯ್ತಿಯಿಲ್ಲದೇ ಎಲ್ಲ
ಮೂಲ ಕಾರ್ಮಿಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು
– ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ಭದ್ರತೆ ಕಲ್ಪಿಸಬೇಕು
–  ಮಾಸಿಕ 18 ಸಾವಿರ ರೂ.ಗಿಂತ ಕಡಿಮೆ ಇಲ್ಲದಂತೆ ಕನಿಷ್ಠ ವೇತನ ನಿಗದಿ
– ಸರ್ಕಾರಿ ಬ್ಯಾಂಕುಗಳಲ್ಲಿನ ನೌಕರರಿಗೆ ಮಾಸಿಕ 3 ಸಾವಿರ ರೂ.ಗೆ ಕಡಿಮೆ ಇಲ್ಲದಂತೆ ಪಿಂಚಣಿ ಹೆಚ್ಚಿಸಬೇಕು
– ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಹಾಗೂ ಬಂಡವಾಳ ವಾಪಸಾತಿ ನಿಲ್ಲಿಸಬೇಕು
– ಬೋನಸ್‌, ಭವಿಷ್ಯ ನಿಧಿ ಪಾವತಿ ಹಾಗೂ ಅರ್ಹತೆಗೆ ಹೇರಲಾದ ಎಲ್ಲ ಮಿತಿಗಳನ್ನು ರದ್ದು ಮಾಡಬೇಕು
– ಉದ್ಯೋಗದಾತರ ಪರವಾಗಿ ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರುವುದನ್ನು ನಿಲ್ಲಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next